ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ₹25 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2020ರ ನವೆಂಬರ್ 16ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಬಿಹಾರ ಮೂಲದ ಗೋವಿಂದ್ ಕುಮಾರ್ ಅವರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪಣಂಬೂರು ದೀಪಕ್ ಪೆಟ್ರೋಲ್ ಬಂಕ್‌ನ ಹಿಂಭಾಗದಿಂದ ಎನ್‌ಎಂಪಿಎ ಮುಖ್ಯ ಆಡಳಿತ ಕಚೇರಿಯ ಕಡೆಗೆ ಸಾಗುವ ರಸ್ತೆಯಲ್ಲಿ ಆರೋಪಿಗಳಾದ ಜಾವೀದ್ ಆಖ್ತರ್ ಅಲಿಯಾಸ್ ಅಖ್ತರ್ (28) ಹಾಗೂ ತೋಯಿದ್ ಖಾದರ್ ಯಾನೆ ತೋಯಿ (24) ಸ್ಕೂಟರ್‌ನಲ್ಲಿ ಬಂದು ಅವರನ್ನು ಅಡ್ಡಗಟ್ಟಿ ತಡೆದಿದ್ದರು.
ಆರೋಪಿಗಳು ಕಬ್ಬಿಣದ ರಾಡ್ ತೋರಿಸಿ ಬೆದರಿಸಿ, ಸುಮಾರು ₹5,000 ಮೌಲ್ಯದ ಮೊಬೈಲ್ ಫೋನ್‌ನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗೋವಿಂದ್ ಕುಮಾರ್ ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 56/2020ರಂತೆ ಐಪಿಸಿ ಕಲಂ 392, 397 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಜ್ಮತ್ ಅಲಿ ಅವರು ಕೈಗೊಂಡು, 2020ರ ನವೆಂಬರ್ 17ರಂದು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳಿಂದ ಕಳವುಗೈದ ಸೊತ್ತನ್ನು ವಶಪಡಿಸಿಕೊಂಡು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ಪ್ರಕರಣವು ಆರಂಭದಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದು, ಬಳಿಕ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1)ಕ್ಕೆ ವರ್ಗಾವಣೆಯಾಯಿತು. ಎಸ್‌ಸಿ ಸಂಖ್ಯೆ 84/2021ರಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಸೆ.16ರಂದು ಆರೋಪಿಗಳಿಬ್ಬರೂ ತಪ್ಪಿತಸ್ಥರೆಂದು ಪರಿಗಣಿಸಿ, ಐಪಿಸಿ ಕಲಂ 392 ಜೊತೆಗೆ 34ರ ಅಡಿಯಲ್ಲಿ ತಲಾ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಭದರಿನಾಥ ನೈಯಾರಿ ಅವರು ವಾದ ಮಂಡಿಸಿದ್ದರು.



























