ಉಪ್ಪಳದಲ್ಲಿ ಒಂದೇ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಎರಡು ಥಾರ್ ಎಸ್‌ಯುವಿ ವಾಹನಗಳನ್ನು ಮಂಜೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎರಡೂ ವಾಹನಗಳಲ್ಲಿ KL 14 AJ 3008 ಎಂಬ ಒಂದೇ ನೋಂದಣಿ ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಸ್ಥಳೀಯರಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿ ವಿಷ್ಣು ನೇತೃತ್ವದ ತಂಡ, ಸಬ್ ಇನ್‌ಸ್ಪೆಕ್ಟರ್ ಶಬರಿ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಾಹನಗಳನ್ನು ಪರಿಶೀಲಿಸಿದರು.
ಪರಿಶೀಲನೆಯ ಬಳಿಕ ಎರಡೂ ಎಸ್‌ಯುವಿಗಳನ್ನು ಪೊಲೀಸರು ವಶಕ್ಕೆ ಪಡೆದು ಮಂಜೇಶ್ವರ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಅಸಲಿ ದಾಖಲೆ ಹೊಂದಿರುವ ವಾಹನದ ಮಾಲೀಕರು ಕಾಸರಗೋಡಿನ ನೆಲ್ಲಿಕುನ್ನುವಿನ ನಿವಾಸಿ ಎಂಬುದು ಪೊಲೀಸ್ ಪರಿಶೀಲನೆಯಲ್ಲಿ ತಿಳಿದುಬಂದಿದೆ.
ಅಧಿಕಾರಿಗಳ ಸೂಚನೆಯಂತೆ ಅವರು ಠಾಣೆಗೆ ಹಾಜರಾಗಿ ತಮ್ಮ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದಾರೆ.ಇದೇ ವೇಳೆ, ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ವಾಹನ ಚಲಾಯಿಸುತ್ತಿದ್ದ ಬೆಲಾ ನಿವಾಸಿಗೆ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಠಾಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಂಜೇಶ್ವರ ಸಬ್ ಇನ್‌ಸ್ಪೆಕ್ಟರ್ ಶಬರಿ ತಿಳಿಸಿದ್ದಾರೆ.




























