ವಿಟ್ಲ:ಪರವಾನಿಗೆ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಕೆಂಪುಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಸೆ.14ರಂದು ನಡೆದಿದೆ.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಕೇರಳ ಕಡೆಯಿಂದ ಕನ್ಯಾನ ಕಡೆಗೆ ಲಾರಿಯಲ್ಲಿ ಕೆಂಪುಕಲ್ಲುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಬಳಿ KA-21-D-0784 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲಿಸಿದಾಗ ಯಾವುದೇ ಪರವಾನಿಗೆ ಅಥವಾ ದಾಖಲೆಗಳಿಲ್ಲದೆ ಕೆಂಪುಕಲ್ಲು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಲಾರಿಯನ್ನು ವಶಪಡಿಸಿಕೊಂಡ ಪೊಲೀಸರು, ಚಾಲಕ ವೀರಕಂಭ ನಿವಾಸಿ ಮಹಮ್ಮದ್ ತೌಕಿರ್ (26), ಲಾರಿ ಮಾಲೀಕ ಮೊಹಮ್ಮದ್ ಸಿಮ್ರಾನ್ ಹಾಗೂ ಅಕ್ರಮ ಸಾಗಾಟಕ್ಕೆ ಸಹಕರಿಸಿದ ಸಜೀರ್ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದೇ ದಿನ ತಡರಾತ್ರಿ ಕುದ್ದುಪದವು ಮಾರ್ಗವಾಗಿ ಕಲ್ಲಡ್ಕ–ಕಾಂಞಗಾಡ್ ಅಂತರರಾಜ್ಯ ಹೆದ್ದಾರಿಯಲ್ಲಿ ಯಾವುದೇ ಪರವಾನಿಗೆ ಅಥವಾ ದಾಖಲೆಗಳಿಲ್ಲದೆ KA-70-A-1926 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯಲ್ಲಿ ಕೆಂಪುಕಲ್ಲು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಉಪನಿರೀಕ್ಷಕ ರಾಮಕೃಷ್ಣ ಅವರು ಲಾರಿಯನ್ನು ವಶಪಡಿಸಿಕೊಂಡು, ಬೆಳ್ತಂಗಡಿ ಕನ್ಯಾಡಿ ನಿವಾಸಿ ಚಂದ್ರೇಶ್ (40) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎರಡೂ ಪ್ರಕರಣಗಳ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




























