ವೇಣೂರು: ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಒಡ್ಡಿದಲ್ಲದೆ, ಕೃಷಿ ಹಾಗೂ ಬೇಲಿಗೆ ಹಾನಿ ಮಾಡಿ ಸುಮಾರು ರೂ.1.30 ಲಕ್ಷ ನಷ್ಟ ಉಂಟುಮಾಡಿದ ಆರೋಪದ ಮೇರೆಗೆ ವೇಣೂರು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹೊಸಂಗಡಿ ನಿವಾಸಿ ಹನೀಫ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವೇಣೂರು ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಪಿರ್ಯಾದಿದಾರ ಮಹಿಳೆ ಸೆ.7ರಂದು ಇತರರೊಂದಿಗೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿ ಹನೀಫ್ ಅತಿಕ್ರಮ ಪ್ರವೇಶ ಮಾಡಿ ಜಾತಿನಿಂದನೆ ಮಾಡಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಜಾಗದಲ್ಲಿದ್ದ ಕೃಷಿ ಹಾಗೂ ಬೇಲಿಗೆ ಹಾನಿ ಮಾಡಿ ಸುಮಾರು ರೂ.1.30 ಲಕ್ಷ ನಷ್ಟ ಉಂಟುಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಸೆ.8ರಂದು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2026ರಂತೆ ಬಿ.ಎನ್.ಎಸ್. 2023ರ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿ ಹನೀಫ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.





























