ಉಪ್ಪಿನಂಗಡಿ: ಕಳೆದ ಜುಲೈ 16 ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಚೇತನ್ ಕೊಲೆಗೆ ಬಳಸಿದ್ದ ಮಾರಕಾಸ್ತ್ರವನ್ನು ಉಪ್ಪಿನಂಗಡಿಯಲ್ಲಿ ಖರೀದಿಸಿದ್ದ ಎಂಬ ಕಾರಣಕ್ಕೆ ಉಪ್ಪಿನಂಗಡಿಯಲ್ಲಿ ಬುಧವಾರದಂದು ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು.
ತನಿಖಾಧಿಕಾರಿಗಳು ಆರೋಪಿ ಚೇತನ್ ನ ಮುಖವನ್ನು ಕಪ್ಪು ಬಟ್ಟೆಯಿಂದ ಮರೆ ಮಾಚಿ ಸ್ಥಳಕ್ಕೆ ಕರೆ ತಂದಿದ್ದು, ಮಹಜರು ಪ್ರಕ್ರಿಯೆಯನ್ನು ನಡೆಸಿದರು.
ತನಿಖಾ ಹಾಗೂ ಮಹಜರು ಪ್ರಕ್ರಿಯೆಗೆ ಕೃಷಿ ಸಲಕರಣೆಗಳ ಮಾರಾಟ ಮಳಿಗೆಯ ಸಿಬ್ಬಂದಿ ಸಹಕರಿಸಿದರು.
ಲಭ್ಯ ಮಾಹಿತಿಯ ಪ್ರಕಾರ ಆರೋಪಿಯು ತನ್ನ ಏಕಮುಖ ಪ್ರೀತಿಯನ್ನು ಮಾನ್ಯ ಮಾಡದ ಲಾವಣ್ಯರನ್ನು ಕೊಲೆಗೈಯುವ ಬಗ್ಗೆ ಪೂರ್ವ ಯೋಜನೆಯನ್ನು ರೂಪಿಸಿದ್ದ. ಇದಕ್ಕೆ ಪೂರಕವಾಗಿ ಜುಲೈ 15 ರಂದೇ ಉಪ್ಪಿನಂಗಡಿಗೆ ಆಗಮಿಸಿ ಅಲ್ಲಿ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ. ಅಲ್ಲಿ ಕೃಷಿಕರ ಬಳಕೆಗೆ ಬೇಕಾಗುವ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆಯನ್ನು ಕೇಳಿದ್ದ. ಬಳಿಕ ಅಲ್ಲಿಂದ ಹೋರ ಹೋಗಿ ಬೇರೆಲ್ಲೋ ವಿಚಾರಿಸಲು ಯತ್ನಿಸಿ ಮರಳಿ ಅದೇ ಮಳಿಗೆಗೆ ಬಂದು ಕತ್ತಿಯನ್ನು ಖರೀದಿಸಿದ್ದ.
ಕಾಗದದಿಂದ ಸುತ್ತುವರೆದು ಪ್ಯಾಕ್ ಮಾಡಲಾದ ಕತ್ತಿಯನ್ನು ಅಲ್ಲೇ ಸ್ವಲ್ಪ ಹೊತ್ತು ಇರಿಸಿ ಹೊರ ಹೋದಾತ ಬಳಿಕ ಬಂದು ಕತ್ತಿಯನ್ನು ಪಡೆದುಕೊಂಡು ಹೋಗಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.


























