ಪುತ್ತೂರು: ಪ್ರಭು ಶ್ರೀರಾಮಚಂದ್ರರ ಕುರಿತು ಪ್ರೊ. ಭಗವಾನ್ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಶಾಸಕ ಅಶೋಕ್ ಕುಮಾರ್ ರೈ, ಇಂತಹ ಹೇಳಿಕೆಗಳು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರೊ. ಭಗವಾನ್ ಯಾವ ಧರ್ಮವನ್ನು ಅನುಸರಿಸುತ್ತಾರೆ ಎಂಬುದು ತಿಳಿದಿಲ್ಲ. ಆದರೆ ಅವರು ಹಿಂದೂ ಧರ್ಮದ ನಂಬಿಕೆ ಮತ್ತು ಭಾವನೆಗಳನ್ನು ಕೆಣಕುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಅವರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.
ಪ್ರೊ. ಭಗವಾನ್ ವಿರುದ್ಧ ಸರ್ಕಾರ ತಕ್ಷಣವೇ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು ಹಾಗೂ ಬಂಧಿಸಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ಯಾವುದೇ ಹಿಂದೂ ಸಂಘಟನೆಗಳು ತಮ್ಮನ್ನು ಸಂಪರ್ಕಿಸಿ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
“ಪ್ರತಿಯೊಬ್ಬರಿಗೂ ತಮ್ಮ ಧರ್ಮ ಮತ್ತು ನಂಬಿಕೆ ಮುಖ್ಯ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳನ್ನು ಸಹಿಸಲಾಗದು. ಈ ಸಂಬಂಧ ಗೃಹ ಸಚಿವರು ಮತ್ತು ಮುಖ್ಯಮಂತ್ರಿಯವರ ಗಮನಕ್ಕೆ ವಿಷಯವನ್ನು ತಂದು, ಪ್ರೊ. ಭಗವಾನ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಲು ಒತ್ತಾಯಿಸುತ್ತೇನೆ” ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.



























