ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಅವಳಿ ಮಕ್ಕಳಿಬ್ಬರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಜಸ್ವಿತ್ ಹಾಗೂ ಜಾವಿನ್ (5) ಮೃತ ದುರ್ದೈವಿ ಮಕ್ಕಳು. ಮನೆಯ ಸಮೀಪದಲ್ಲಿದ್ದ ಸುಮಾರು 15 ಅಡಿ ಆಳದ ಬಾವಿಗೆ ಕಾಲು ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮಕ್ಕಳ ತಂದೆ ವಸಂತ ಅವರು ವೆಲ್ಡಿಂಗ್ ಕೆಲಸಕ್ಕೆ ತೆರಳಿದ್ದರೆ, ತಾಯಿ ದಿವ್ಯ ಅವರು ಕೂಲಿ ಕೆಲಸಕ್ಕೆ ಹೋಗಿದ್ದರು. ಘಟನೆ ನಡೆದ ವೇಳೆ ಮನೆಯಲ್ಲಿ ಅಜ್ಜ ಹಾಗೂ ಅಜ್ಜಿ ಮಾತ್ರ ಇದ್ದರೆನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಬಾವಿಯಿಂದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಈ ದಾರುಣ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.



























