ಆಲಂಕಾರು ಕಜೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಜಗೋಳಿಯ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ದಂಪತಿ ಜೂನ್ 20ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿಯನ್ನು ಹತ್ಯೆಗೈದ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ದಂಪತಿ ತಮ್ಮ ಎರಡು ವರ್ಷದ ಪುತ್ರಿ ಧ್ರುವಿಯೊಂದಿಗೆ ವಾಸವಾಗಿದ್ದರು.
ಒಂದು ತಿಂಗಳ ಹಿಂದೆ ಆಲಂಕಾರು ಪೇಟೆಯಲ್ಲಿದ್ದ ಹೋಟೆಲ್ ವ್ಯವಹಾರವನ್ನು ಬಿಟ್ಟು ತೆರಳಿದ್ದ ಇವರು, ಜೂನ್ 19ರ ಸಂಜೆ ಮತ್ತೆ ಆಲಂಕಾರು ಕಜೆಯ ಬಾಡಿಗೆ ಮನೆಗೆ ಬಂದಿದ್ದರು ಎನ್ನಲಾಗಿದೆ. ಜೂನ್ 20ರಂದು ಈ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದ ವೇಳೆ ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು. ಮನೆಯಲ್ಲಿದ್ದ ಎರಡು ವರ್ಷದ ಮಗು ಅತ್ತ ಬಳಿಕ ಮತ್ತೆ ನಿದ್ದೆಗೆ ಜಾರಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



























