ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕನಿಗೆ ಹಠಾತ್ ಹೃದಯಾಘಾತ ಉಂಟಾದ ಪರಿಣಾಮ ಬಸ್ ರಸ್ತೆ ಮಧ್ಯೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಘಟನೆ ಸೋಮವಾರ ಬೆಳಗ್ಗೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಮಾಧವ ಕೃಪಾ ಶಾಲೆಗೆ ಸೇರಿದ ಬಸ್ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕ ಸುರೇಶ್ ಸಣ್ಣಕ್ಕಿಬೆಟ್ಟು (54) ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಅಸ್ವಸ್ಥತೆಯ ನಡುವೆಯೂ ಪರಿಸ್ಥಿತಿಯನ್ನು ಅರಿತ ಚಾಲಕ ಸುರೇಶ್ ಅವರು ಬಸ್ ಅನ್ನು ರಸ್ತೆ ಬದಿಗೆ ತರುವ ಪ್ರಯತ್ನ ನಡೆಸಿದ್ದಾರೆ. ಆದರೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.
ಘಟನೆಯ ವೇಳೆ ಬಸ್‌ನಲ್ಲಿ ವಿದ್ಯಾರ್ಥಿಗಳು ಇದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ಚಾಲಕನ ಸಮಯಪ್ರಜ್ಞೆ ತಪ್ಪಿಸಿದೆ ಎಂದು ಸ್ಥಳೀಯರು ಪ್ರಶಂಸಿಸಿದ್ದಾರೆ.
ಅಪಘಾತದ ಬಳಿಕ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ತಕ್ಷಣ ಚಾಲಕನ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.


























