ಉಪ್ಪಿನಂಗಡಿ, ಜೂನ್ 17: ಅಕ್ರಮವಾಗಿ ಸಾಗಿಸಲಾಗುತ್ತಿದ್ದ 16 ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜೂನ್ 17ರ ಬೆಳಿಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ&ಸು) ಸುತೇಶ್ ಕೆ.ಪಿ. ಅವರು ಸಿಬ್ಬಂದಿಯೊಂದಿಗೆ ಉಪ್ಪಿನಂಗಡಿ ಸಮೀಪದ ಆನೆಬೈಲು ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕೆಎ-14-ಎ-7511 ಸಂಖ್ಯೆಯ ಈಚರ್ ಲಾರಿಯನ್ನು ಪರಿಶೀಲಿಸಿದರು. ಈ ವೇಳೆ ಲಾರಿಯಲ್ಲಿ 16 ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಯಿತು.
ಲಾರಿಯಲ್ಲಿದ್ದ ಚಾಲಕ ಕಡೂರು ನಿವಾಸಿ ಪರ್ದಿನ್ ಖಾನ್ (24) ಹಾಗೂ ಹಾಸನ ಜಿಲ್ಲೆಯ ಹೋಳೆನರಸೀಪುರ ನಿವಾಸಿ ಜಾವೀದ್ ಪಾಷಾ (34) ಅವರನ್ನು ವಿಚಾರಿಸಿದಾಗ, ಜಾನುವಾರು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಅಗತ್ಯ ದಾಖಲೆಗಳನ್ನು ಹೊಂದಿರದಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿ ಹಾಗೂ 16 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 91/2026 ದಾಖಲಿಸಲಾಗಿದೆ.
ಪ್ರಕರಣವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 5, 6 ಹಾಗೂ 12, ಪ್ರಾಣಿ ಹಿಂಸಾ ತಡೆ ಕಾಯ್ದೆಯ ಕಲಂ 11(ಡಿ) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 3(5) ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



























