ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ ಹಾಗೂ ನಾಳೆ ನಾಮ ಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಕೆಲ ಕ್ಷೇತ್ರದಲ್ಲಿ ಯಾವ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕಾದು ನೋಡಬೇಕಿದೆ.
ವಿಟ್ಲದ ಎರಡು ವಾರ್ಡುಗಳು ಇದರಲ್ಲಿ ಮುಂಚೂಣಿಯಲ್ಲಿದೆ ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ 11 ಹಾಗೂ 14 ವಾರ್ಡುಗಳು ಜನರ ಗಮನ ಸೆಳೆದಿದೆ.
ವಿಟ್ಲ ಪಟ್ಟಣ ಪಂಚಾಯತ್ ನ ಮಾಜಿ ಅಧ್ಯಕ್ಷ ಅರುಣ ವಿಟ್ಲ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ್ ವಿಟ್ಲ ಸ್ಪರ್ಧಿಸಿರುವ 11 ನೇ ವಾರ್ಡಿನಲ್ಲಿ ಬಿಜೆಪಿಯ ಹಿರಿಯ ಮುಖಂಡ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಾನ್ ಡಿಸೋಜ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು ಬಹಳಷ್ಟು ಕುತೂಹಲ ಕೆರಳಿಸಿದೆ, ವಿಟ್ಲದ ಪ್ರಥಮ ಪ್ರಜೆಯಾಗಿ ಸಾಕಷ್ಟು ಜನಪರ ಕೆಲಸ ಮಾಡಿರುವ ಜಾನ್ ಡಿಸೋಜ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಕಡೆಯಿಂದ ಸಾಕಷ್ಟು ಒತ್ತಡಗಳು ಬರುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದ್ದು ಹಲವರ ಮೂಲಕ ಒತ್ತಡ ಹೇರಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಮೂರು ಅಭ್ಯರ್ಥಿಗಳು ಈ ಹಿಂದೆ ಅದ್ಯಕ್ಷರಾಗಿ ಹಿಡಿತ ಸಾಧಿಸಿದ್ದು ಸದ್ಯ ಕಣದಿಂದ ಜಾನ್ ಡಿಸೋಜ ಹಿಂದೆ ಸರಿಬಹುದಾ ಇಲ್ಲವಾ ಎಂಬ ಕುತೂಹಲ ವಿಟ್ಲದ ನಾಗರೀಕರಲ್ಲಿ ಇದೆ.
ಇನ್ನೊಂದೆಡೆ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಅಶೋಕ್ ಕುಮಾರ್ ಶೆಟ್ಟಿ ಅವರು ಸ್ಥಳೀಯ ಕೆಲ ನಾಯಕರ ವಿರೋಧದ ನಡುವೆಯೂ ಹೈಕಮಾಂಡ್ ಇಂದ ನೇರವಾಗಿ ಟಿಕೆಟ್ ಪಡೆದು 14ನೇ ವಾರ್ಡಿನಿಂದ ಕಣದಲ್ಲಿದ್ದಾರೆ, ಬಿಜೆಪಿಯ ಕೆಲ ನಾಯಕರ ಬೆಂಬಲದಿಂದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೋಹನ್ ಸೇರಾಜೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಅವರನ್ನು ಕಣದಿಂದ ಹಿಂದೆ ಸರಿಯಲು ಕೂಡ ಅನೇಕರ ಕರೆಗಳು ಹೋಗಿದ್ದು ಭಾಗಶಃ ಒಪ್ಪಿದ ಅವರನ್ನು ಬಿಜೆಪಿಯ ಅಶೋಕ್ ಕುಮಾರ್ ಶೆಟ್ಟಿ ವಿರೋಧಿ ಪಡೆ ಹಿಂಪಡೆಯದಂತೆ ಪ್ರೇರಿಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ವಿಟ್ಲದ ಲೋಕಲ್ ರಾಜಕೀಯ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆಯುತ್ತಿದೆ.