ವಿಟ್ಲ: ಪ.ಪಂ.ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಣಾಳಿಕೆ ಪತ್ರವನ್ನು ಸಾಮಾಜಿಕ ಮತ್ತು ಅಭಿವೃದ್ಧಿ ಕಾಳಜಿಯುಳ್ಳ ನಾಗರಿಕರಿಗೆ ನೀಡಿ, ಅವರ ಅಭಿಪ್ರಾಯವನ್ನು ಪಡೆದುಕೊಂಡು ಬಳಿಕ ಅಧಿಕೃತ ಪ್ರಣಾಳಿಕೆ ಬಿಡುಗಡೆಗೊಳಿಸಲಿದೆ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಘೋಷಿಸಿದರು.
ಅವರು ವಿಟ್ಲದ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪ್ರಜೆಗಳಿಂದ ಪ್ರಣಾಳಿಕೆ ಪತ್ರವನ್ನು ಬಿಡುಗಡೆಗೊಳಿಸಿ, ಮಾತನಾಡಿ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಮತದಾರರ ಬಳಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತೆರಳಿ, ಪ್ರಣಾಳಿಕೆ ಅಂಶಗಳನ್ನು ಸಂಗ್ರಹಿಸಲಿದ್ದಾರೆ. ಪಕ್ಷ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರನ್ನು ಗೆಲ್ಲಿಸಿದಲ್ಲಿ ಪ್ರಣಾಳಿಕೆಯಂತೆ ನಡೆದುಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷ ೧೬೬ ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ರಾಜ್ಯದಲ್ಲಿ ಅಧಿಕಾರ ಪಡೆದ ಅವಧಿಯಲ್ಲಿ ೧೭೦ಕ್ಕೂ ಅಧಿಕ ಅಂಶಗಳನ್ನು ಈಡೇರಿಸಿದೆ. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಶೇ.೧೦ರಷ್ಟು ಕೂಡಾ ಭರವಸೆ ಈಡೇರುವುದಿಲ್ಲ ಎಂದು ಹೀಯಾಳಿಸಿದರು.
ಈ ಬಾರಿಯ ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಪಡೆಯಲಿದೆ. ಜನರ ಒಲವು ಕಾಂಗ್ರೆಸ್ ಮೇಲಿದೆ. ಕಳೆದ ಅವಧಿಯಲ್ಲಿ ಬಿಜೆಪಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ದೂರಿದರು. ‘ಕಾಂಗ್ರೆಸ್‌ನಿಂದ ಬಿಜೆಪಿ ಹೋದವರ ಜತೆ ಕಾರ್ಯಕರ್ತರು ಇಲ್ಲದಂತಾಗಿದೆ’. ಮತ್ತೆ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಉಸ್ತುವಾರಿಗಳಾದ ಎಂ.ಎಸ್.ಮಹಮ್ಮದ್, ಪ್ರವೀಣಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಚಂದ್ರಹಾಸ ಕರ್ಕೇರ, ಮಹಮ್ಮದಾಲಿ ಪುತ್ತೂರು, ವಕ್ತಾರ ರಮಾನಾಥ ವಿಟ್ಲ, ನಗರ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್, ಎಂ.ಬಿ.ವಿಶ್ವನಾಥ ರೈ, ಅಬ್ದುಲ್ ರಹಿಮಾನ್, ಎಂ.ಕೆ.ಮೂಸಾ, ವಿ.ಎ.ರಶೀದ್ ಮತ್ತಿತರರು ಉಪಸ್ಥಿತರಿದ್ದರು.