ಬಂಟ್ವಾಳ, ಮೇ 18: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಾಹನ ಮಾಲೀಕರಿಗೆ ಮಾನ್ಯ ನ್ಯಾಯಾಲಯವು ತಲಾ ₹25,000 ದಂಡ ವಿಧಿಸಿದೆ.
ಮೊದಲ ಪ್ರಕರಣವು 06.04.2026ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ನಲ್ಲಿ ನಡೆದಿದ್ದು, KA-19-HT-9694 ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿರುವುದು ವಾಹನ ತಪಾಸಣೆಯ ವೇಳೆ ಪೊಲೀಸರಿಗೆ ಪತ್ತೆಯಾಯಿತು.
ಇನ್ನೊಂದು ಪ್ರಕರಣವು 28.04.2026ರಂದು ಬಿಸಿ ರೋಡ್ ಬಳಿ ನಡೆದಿದ್ದು, KA-05-KG-6785 ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದುದನ್ನು ಸಂಚಾರ ಪೊಲೀಸರು ಪತ್ತೆಹಚ್ಚಿದರು.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ, ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಆರೋಪದಡಿ ವಾಹನ ಮಾಲೀಕರ ವಿರುದ್ಧ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಭಾರತೀಯ ಮೋಟಾರು ವಾಹನ ಕಾಯ್ದೆಯ ಕಲಂ 199(A) ಅಡಿಯಲ್ಲಿ ಪ್ರಕರಣ ದಾಖಲಿಸಿ, ಮಾನ್ಯ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣಗಳ ವಿಚಾರಣೆಯನ್ನು 18.05.2026ರಂದು ನಡೆಸಿದ ನ್ಯಾಯಾಲಯವು ಎರಡೂ ವಾಹನಗಳ ಮಾಲೀಕರಿಗೆ ತಲಾ ₹25,000 ದಂಡ ವಿಧಿಸಿ ಆದೇಶಿಸಿದೆ.
ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪ್ರಾಪ್ತರಿಂದ ವಾಹನ ಚಾಲನೆಗೆ ಅವಕಾಶ ನೀಡುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



























