ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಕಂಚಿಕಾರ ಪೇಟೆ ಸಮೀಪದ ನದಿ ಬದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಈ ಕುರಿತು ಬಂಟ್ವಾಳ ಕಸಬಾ ನಿವಾಸಿ ಸಾಕೀರ್(37) ಅವರಿಗೆ ಸ್ನೇಹಿತನೊಬ್ಬ ಮಾಹಿತಿ ನೀಡಿದ್ದು, ಬಳಿಕ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಮಾರು 50 ರಿಂದ 55 ವರ್ಷದ ವ್ಯಕ್ತಿಯ ಮೃತದೇಹ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ.16/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ತನಿಖೆಯಲ್ಲಿ ಮೃತ ವ್ಯಕ್ತಿಯ ಗುರುತು ಬಂಟ್ವಾಳ ಗೂಡಿನಬಳಿ ನಿವಾಸಿ ಇರ್ಫಾನ್(39) ಎಂದು ಪತ್ತೆಯಾಗಿದ್ದು, ಮೃತರ ತಂದೆಯವರು ಗುರುತಿಸಿದ್ದಾರೆ.
ಇನ್ನೊಂದೆಡೆ, ಇರ್ಫಾನ್ ಅವರ ಸಾವಿನ ಬಗ್ಗೆ ಕುಟುಂಬ ಸದಸ್ಯರು ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವರದಿ ಪಡೆಯಲಾಗುತ್ತಿದೆ. ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.


























