ಉಳ್ಳಾಲ: ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಆರೋಪಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಲಪಾಡಿ ಪರಿಸರದಲ್ಲಿ ನಡೆದಿದೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ನಿವಾಸಿ ಮುಸ್ತಫ(18) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಮುಸ್ತಫ ಸ್ಕೂಟರಿನಲ್ಲಿ ಬಂದು ತಲಪಾಡಿ ಶ್ರೀ ರಾಮ ಭಜನಾ ಮಂದಿರದ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದಕ್ಕೂ ಮೊದಲು ಕಳೆದ ವಾರ ಇದೇ ಕಾಮುಕ ತಲಪಾಡಿಯ ದೇವಿಪುರಕ್ಕೆ ತೆರಳುವ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಸ್ಥಳೀಯರು ಆರೋಪಿಯ ಚಹರೆಯನ್ನು ಪತ್ತೆಹಚ್ಚಿದ್ದರು.
ಕಳೆದೊಂದು ವಾರದಲ್ಲಿ ನಡೆದ ಈ ಎರಡು ಕಿರುಕುಳ ಕೃತ್ಯವನ್ನು ಆರೋಪಿ ಮುಸ್ತಫ ಎಸಗಿದ್ದನೆನ್ನಲಾಗಿದ್ದು, ಈ ಬಗ್ಗೆ ಸಂತ್ರಸ್ತೆ ಯುವತಿಯರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪೊಕ್ಸೋ ಸಹಿತ ಎರಡು ಪ್ರಕರಣಗಳು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.