ಉಡುಪಿ: ಜಿಲ್ಲೆಯಲ್ಲಿ ದನ ಕಳ್ಳರ ಹಾವಳಿ ಮುಂದುವರೆದಿದ್ದು, ಮದುವೆ ರೀತಿ ಸಿಂಗರಿಸಿದ ಇನ್ನೋವಾ ಕಾರಿನ ಹಿಂದೆ ಪಿಕಪ್ ವಾಹನದಲ್ಲಿ ಕಳ್ಳರು ದನ ಸಾಗಾಟ ಮಾಡುತ್ತಿರುವುದು ಶಿರ್ವದಲ್ಲಿ ಪತ್ತೆಯಾಗಿದೆ.
ಮಂಗಳವಾರ ತಡರಾತ್ರಿ ಪೆರ್ಡೂರಿನಿಂದ ಮಂಗಳೂರಿಗೆ ಇನ್ನೋವಾ ಹಾಗೂ ಪಿಕಪ್ ವಾಹನದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಕಾರ್ಯಾಚರಣೆಗೆ ಇಳಿದ ಹಿಂದು ಸಂಘಟನೆಯ ಕಾರ್ಯಕರ್ತರು ವಾಹನಗಳನ್ನು ಹಿಂಬಾಲಿಸಿಕೊಂಡು ಹೋಗಿ ಶಿರ್ವದ ಬಳಿ ತಡೆದಿದ್ದಾರೆ.
ಈ ವೇಳೆ ವಾಹನವನ್ನು ರಸ್ತೆಯಲ್ಲೇ ಬಿಟ್ಟು, ಗೋಕಳ್ಳರು ಪರಾರಿಯಾಗಿದ್ದಾರೆ. ಕಾರ್ಯಕರ್ತರು ಇನ್ನೋವಾ ಹಾಗೂ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಗೋಕಳ್ಳರು ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಕಟ್ಟಿ ಸಾಗಿಸುತ್ತಿದ್ದರು. ವಾಹನದಲ್ಲಿ ಒಟ್ಟು 12 ದನಗಳಿದ್ದು, ಆ ಪೈಕಿ ಎರಡು ದನಗಳು ಸಾಗಾಟದ ವೇಳೆ ಉಸಿರುಗಟ್ಟಿ ಮೃತಪಟ್ಟಿವೆ. ಉಳಿದ 10 ದನಗಳನ್ನು ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ನಡೆಯುತ್ತಿದೆ.



























