ಪುತ್ತೂರು: ವಾಣಿಜ್ಯ ಸಂಕೀರ್ಣಕ್ಕೆ ಕಾನೂನು ಬಾಹಿರವಾಗಿ ಖಾತೆ ನೀಡಿರುವ ನಗರಸಭಾ ಪೌರಾಯುಕ್ತರಾಗಿದ್ದ ರೂಪ ಟಿ. ಶೆಟ್ಟಿ ವಿರುದ್ಧ ನಗರಸಭಾ ಮಾಜಿ ವಿಪಕ್ಷ ನಾಯಕ ಮಹಮ್ಮದ್ ಆಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ ಘಟನೆ ಜ.12 ರಂದು ದರ್ಬೆಯಲ್ಲಿ ನಡೆಯಿತು.
ಪುತ್ತೂರು ಮುಖ್ಯ ರಸ್ತೆಯ ದರ್ಬೆಯಲ್ಲಿ ಎರಡು ಮಹಡಿ ನಿರ್ಮಿಸುವ ಬದಲು ನಿಯಮ ಉಲ್ಲಂಘಿಸಿ 3 ಮಹಡಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು, ಈ ಕಟ್ಟಡ ನಿರ್ಮಿಸುವಾಗ ಸೆಟ್ ಬ್ಯಾಕ್ ಗೆ ಬಿಡಬೇಕಾದ ಸ್ಥಳ ಬಿಟ್ಟಿಲ್ಲ, ರಸ್ತೆಗೆ ಬಿಡಬೇಕಾದ ಸ್ಥಳವನ್ನು ಬಿಟ್ಟಿಲ್ಲ, ರಸ್ತೆಯ ಸ್ಥಳವನ್ನು ನಗರಸಭೆಗೆ ಹಸ್ತಾಂತರ ಮಾಡಿಲ್ಲ, ಕಟ್ಟಡ ಸ್ಥಳಕ್ಕೆ ಏಕ ನಿವೇಶನ ನಕ್ಷೆ ಅನುಮೋದನೆ ಪಡೆದುಕೊಂಡಿಲ್ಲ, ಪಾರ್ಕ್ ಮತ್ತು ಪಾರ್ಕಿಂಗ್ ಗೆ ಝೋನಲ್ ರೆಗ್ಯುಲೇಷನ್ ನಂತೆ ಸ್ಥಳ ಕಾದಿರಿಸಿಲ್ಲ ಎಂದು ದೂರು ನೀಡಲಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಈ ಕಟ್ಟಡದ ಅನಧಿಕೃತ ರಚನೆಯನ್ನು ತೆರವು ಗೊಳಿಸುತ್ತೇನೆ ಎಂದು ಲಿಖಿತ ಒಪ್ಪಿಗೆ ಕೊಟ್ಟು ಬಳಿಕ ಪೌರಾಯುಕ್ತೆ ರೂಪ ಟಿ. ಶೆಟ್ಟಿ ಯವರು ಇದರ ಅನಧಿಕೃತ ರಚನೆಯನ್ನು ತೆರವುಗೊಳಿಸಲು ಮುಂದಾಗದೆ ಕಟ್ಟಡ ಮಾಲಕರ ಆಮಿಷಕ್ಕೆ ಬಲಿಯಾಗಿ ನಗರಸಭೆಯ ಇಂಜಿನಿಯರ್ ರ ವರದಿಯನ್ನು ಧಿಕ್ಕರಿಸಿ ಈ ಅನಧಿಕೃತ ಕಟ್ಟಡಕ್ಕೆ ಕಾನೂನು ಬಾಹಿರವಾಗಿ ಖಾತೆ ನೀಡಿದ್ದಾರೆ. ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆದುದರಿಂದ ಪೌರಾಯುಕ್ತೆ ರೂಪ ಟಿ. ಶೆಟ್ಟಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಮಾಜಿ ವಿಪಕ್ಷ ನಾಯಕ ಎಚ್. ಮಹಮ್ಮದ್ ಅಲಿಯವರು ಕರ್ನಾಟಕ ಲೋಕಾಯುಕ್ತ ಕಚೇರಿಗೆ 2020ರ ಮಾ.3 ರಂದು ದೂರು ಸಲ್ಲಿಸಿದ್ದರು.
ಈ ದೂರಿನ ವಿಚಾರಣೆ ಕೈಗೆತ್ತಿಗೊಂಡಿದ್ದ ಉಪ ಲೋಕಾಯುಕ್ತರು ಈ ಕುರಿತು ತನಿಖೆ ನಡೆಸಿ ವರದಿ ನೀಡಬೇಕೆಂದು ಅದೇಶಿಸಿದ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ವಿಭಾಗದ ಡಿವೈಎಸ್ಪಿ ಚೆಲುವರಾಜ್ ರವರ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಜ.12 ರಂದು ಪುತ್ತೂರು ದರ್ಬೆಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲನೆ ಮಾಡಿ ತನಿಖೆ ನಡೆಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಈಗಿನ ಪೌರಾಯುಕ್ತ ಮಧು ಎಸ್. ಮನೋಹರ್, ಪೂಡದ ಸಹಾಯಕ ನಿರ್ದೇಶಕ ಅಭಿಲಾಷ್ ಎಂ ಪಿ, ನಗರಸಭಾ ಎಇಇ ಅರುಣ್, ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ಕಿರಿಯ ಇಂಜಿನಿಯರ್ ಶ್ರೀಧರ್ ನಾಯ್ಕ್, ಹಿರಿಯ ಅರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ನಗರ ಸಭೆ ಹಾಗೂ ಪೂಡದ ಸಿಬ್ಬಂದಿಗಳು, ದೂರುದಾರ ಎಚ್. ಮಹಮ್ಮದ್ ಅಲಿ ಹಾಗೂ ಕಟ್ಟಡ ಮಾಲಕ ಉಮೇಶ್ ನಾಯಕ್ ಉಪಸ್ಥಿತರಿದ್ದರು.