ಮಂಗಳೂರು: ಭಾರತದಲ್ಲಿ ಕೆಲವು ಆನ್‌ಲೈನ್ ಲೋನ್ ಅಪ್ಲಿಕೇಶನ್‌ಗಳಿಗೆ ಆರ್.ಬಿ.ಐ ನ ಮಾನ್ಯತೆಯಿಲ್ಲ. ಆದ್ದರಿಂದ ಸಾರ್ವಜನಿಕರು ಆನ್‌ಲೈನ್ ಲೋನ್ ಅಪ್ಲಿಕೇಶನ್ ಬಳಸುವಾಗ ಎಚ್ಚರದಿಂದಿರಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ನಗರದ ಹೊರವಲಯದ ಸುರತ್ಕಲ್‌ನ ಕುಳಾಯಿಯ ಎರಡು ದಿನಗಳ ಹಿಂದೆ ಯುವಕನೊಬ್ಬ ಆಫೀಸ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದ. ಇದೇ ಸಂದರ್ಭ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿತ್ತು. ಇದರಲ್ಲಿ ಆನ್‌ಲೈನ್ ಲೋನ್ ಕಾಟದ ಬಗ್ಗೆ ಬರೆಯಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ, ಈತ ಲೋನ್ ಅ್ಯಪ್‌ನಲ್ಲಿ ಲೋನ್ ಪಡೆದಿದ್ದ, ಆತ ಅದರ ಲೋನ್ ಮರುಪಾವತಿಸದ ಕಾರಣ ಆತ್ಮಹತ್ಯೆಗೈದಿದ್ದ. ಇದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಮೊದಲ ಪ್ರಕರಣ ಎಂದು ಹೇಳಿದರು. ಸಾರ್ವಜನಿಕರು ಈ ಲೋನ್ ಆ್ಯಪ್ ಬಗ್ಗೆ ಎಚ್ಚರವಾಗಿರಬೇಕು. ಭಾರತದಲ್ಲಿ ಸರಿಸುಮಾರು 600 ಲೋನ್ ಆ್ಯಪ್‌ಗಳಿವೆ.
ಇಂತಹ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಕಾಂಟಕ್ಟ್, ವಾಟ್ಸಪ್ ಚಾಟ್ ಗ್ಯಾಲರಿ ಸೇರಿ ಹಲವು ಅಕ್ಸೆಸ್ ಕೇಳುತ್ತದೆ. ಹಣದ ಆಸೆಗೆ ಇಂತಹ ಆಕ್ಸೆಸ್ ಕೊಟ್ಟ ನಂತರ ಕಂಪನಿಗಳು ಕಿರುಕುಳ ಕೊಡುತ್ತವೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಉತ್ತಮ ತಂಡ ರಚನೆ ಮಾಡಿ ತನಿಖೆಯಾಗುತ್ತಿದೆ. ಆದ್ದರಿಂದ ಡಿಜಿಟಲೀಕರಣಗೊಂಡ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಎಚ್ಚರಿಸಿದರು.