ಪುತ್ತೂರು : ಅಭಿಷೇಕ ಪ್ರಿಯ, ನೀಲಕಂಠ ಶಿವ ದೇವನಿಗೆ ಮಾ. 11ರಂದು ಶಿವರಾತ್ರಿ ಸಂಭ್ರಮ. ಈ ಪುಣ್ಯ ದಿನದಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಸಂಜೆ ಶ್ರೀ ದೇವರ ಬಲಿ ಹೊರಟು ಪಲ್ಲಕ್ಕಿ ಸೇವೆ, ರಥೋತ್ಸವ, ಕೆರೆ ಕಟ್ಟೆ ಉತ್ಸವ ನಡೆಯಿತು.
ಪ್ರದಕ್ಷಿಣೆ ಸೇವೆಯಲ್ಲಿ ಜನಸ್ತೋಮ
ಶಿವರಾತ್ರಿ ಪ್ರಯುಕ್ತ ಸಾಲು ಸಾಲು ಭಕ್ತರು ಸೇರಿದ್ದ ದೇಗುಲದಲ್ಲಿ ಸೇವೆ ಹಾಗೂ ಪ್ರಸಾದ ಸ್ವೀಕಾರ ವ್ಯವಸ್ಥೆ ಮಾಡಲಾಗಿತ್ತು.ದೇಗುಲಕ್ಕೆ ಆಗಮಿಸಿದ ಭಕ್ತರು ಪ್ರದಕ್ಷಿಣೆ ಸೇವೆ ಸಲ್ಲಿಸಿದರು. ವರ್ಷದಿಂದ ವರ್ಷಕ್ಕೆ ಪ್ರದಕ್ಷಿಣೆ ಸೇವಾಕರ್ತ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ವಿದ್ಯುತಾಲಂಕಾರದ ಮೆರುಗು :
ದೇವಸ್ಥಾನದ ರಾಛಗೋಪುರ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕೃತಗಳಿಂದ ಕಂಗೊಳಿಸುತ್ತಿತ್ತು. ದೇವಳದ ಸುತ್ತುಪೌಳಿ, ರಾಜಾಂಗಣ ಸುಂದರವಾಗಿ ಮೂಡಿಬಂದಿದ್ದು, ಗೋವರ್ಧನ್ ಅವರು ರಥ ಸಿಂಗರಿಸಿದ್ದರು. ದೇವರು ಸವಾರಿ ಮಾಡುವ ತೆಪ್ಪ ಹಾಗೂ ಪ್ರತಿಮೆಯ ಸುತ್ತ ವಿದ್ಯುತ್ ದೀಪಗಳನ್ನು ಅಳವಡಿಸಿ ಕಂಗೊಳಿಸಲಾಗಿತ್ತು..