ವಿಟ್ಲ : ಇಲ್ಲಿನ ಅಡ್ಡದ ಬೀದಿಯಲ್ಲಿ ಒಂಟಿ ಮಹಿಳೆ ಮನೆಯಲ್ಲಿದ್ದ ಸಂದರ್ಭ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಅಡ್ಡದ ಬೀದಿ ರಸ್ತೆಯಲ್ಲಿ ಎಳನೀರು ವ್ಯಾಪಾರಿಯಾಗಿರುವ ಸುಲೈಮಾನ್ ಪತ್ನಿ ಭೀಪಾತುಮ್ಮಾ(50) ಗಂಭೀರವಾಗಿ ಗಾಯಗೊಂಡವರು.
ಸುಲೈಮಾನ್ ಅವರು ಮಧ್ಯಾಹ್ನದ ಊಟ ಮುಗಿಸಿ ಅಂಗಡಿಗೆ ಬಂದಿದ್ದ ಸಂದರ್ಭ ಮನೆಯಲ್ಲಿ ಪತ್ನಿ ಭೀಪಾತುಮ್ಮಾ ಒಂಟಿಯಾಗಿದ್ದರು. ಇದೇ ಸಂದರ್ಭ ಅಪರಿಚಿತರಿಬ್ಬರು ಕರೆಂಟ್ ಬಿಲ್ ನೀಡುವ ನೆಪದಲ್ಲಿ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆ ಮೇಲೆ ಕತ್ತಿಯಿಂದ ಮನಬಂದಂತೆ ಕಡಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮಹಿಳೆಯ ಬೊಬ್ಬೆ ಕೇಳಿಸಿದ ನೆರೆಯವರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ತುರ್ತುವಾಹನ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಬಲಗೈ, ಕುತ್ತಿಗೆ ಸೇರಿದಂತೆ ಹಲವೆಡೆಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದು ಶ್ವಾನದಳ ಕರೆಸಲಾಗಿದೆ. ವರ್ಷದ ಹಿಂದಷ್ಟೇ ಇದೇ ರೀತಿ ವಿಟ್ಲದ ಮೇಗಿನ ಪೇಟೆಯಲ್ಲೂ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಉತ್ತರ ಭಾರತ ಮೂಲದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರೂ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದರು. ವಿಟ್ಲ ಸುತ್ತಮುತ್ತ ಕೆಲದಿನಗಳಿಂದ ಗ್ಯಾಸ್ ಸ್ಟವ್ ರಿಪೇರಿ, ಪ್ಲಾಸ್ಟಿಕ್ ವಸ್ತುಗಳ ಮಾರಾಟ ನೆಪದಲ್ಲಿ ಅಪರಿಚಿತರು ಸುತ್ತಾಡುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.































