ವಿಟ್ಲ: ಕೆಲ ದಿನಗಳಿಂದ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹಿಜಾಬ್ ಪ್ರಕರಣವನ್ನು ಎನ್.ಐ.ಎ. ಗೆ ತನಿಖೆಗೆ ನೀಡಬೇಕೆಂದು ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ವತಿಯಿಂದ ಉಪತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ ಇದೊಂದು ಜಿಹಾದಿನ ಷಡ್ಯಂತ್ರ, ಮುಸಲ್ಮಾನ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾ ವಾದವನ್ನು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಪ್ರಕರಣದ ಹಿಂದೆ PFI – SDPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದ್ದು, ಅಲ್ಲದೆ ಇದರ ಹಿಂದೆ ಪಾಕಿಸ್ತಾನ, ತಾಲಿಬಾನಿನಂತಹ ಇಸ್ಲಾಂ ಮೂಲಭೂತವಾದಿಗಳು ಬೆಂಬಲಕೊಡುತ್ತಿರುವುದು ಆತಂಕಕಾರಿಯಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ. ನ್ಯಾಯಾಲಯದ ತೀರ್ಪನ್ನು ಪಾಲಿಸದೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದು ಇವರ ಜಿಹಾದಿ ಮಾನಸಿಕತೆಯನ್ನು ತೋರಿಸುತ್ತಿದೆ.
ಈ ಹಿನ್ನಲೆಯಲ್ಲಿ ಈ ಪ್ರಕರಣದ ಹಿಂದೆ ದೇಶ ವಿಭಜನೆಯ ಸಂಚು ಇರುವ ಸಂಶಯ ವ್ಯಕ್ತವಾಗುತ್ತಿದ್ದು, ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಪ್ರಕರಣವನ್ನು ಪ್ರಾರಂಭಿಸಿದ 6 ವಿದ್ಯಾರ್ಥಿನಿಯರನ್ನು ಮತ್ತು ಅವರಿಗೆ ಬೆಂಬಲವಾಗಿ ನಿಂತು ಈ ಸಂಚನ್ನು ರೂಪಿಸಿದವರ ವಿರುದ್ಧ ಎನ್.ಐ.ಎ. (ರಾಷ್ಟ್ರೀಯ ತನಿಖಾದಳ) ಮುಖಾಂತರ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಅಧ್ಯಕ್ಷರು ಪದ್ಮನಾಭ ಕಟ್ಟೆ ವಿಟ್ಲ, ಕಾರ್ಯದರ್ಶಿ ನಾಗೇಶ ಸಾಲೆತ್ತೂರು, ಸಂಚಾಲಕರು ಚಂದ್ರಹಾಸ ಕನ್ಯಾನ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.