ಪುತ್ತೂರು: ಇತ್ತೀಚಿಗೆ ಸಚಿವ ಈಶ್ವರಪ್ಪ ರವರು ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಈ ನಿಟ್ಟಿನಲ್ಲಿ ಈಶ್ವರಪ್ಪ ರವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ-ಉಪ್ಪಿನಂಗಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಕೆ. ಎಸ್. ಈಶ್ವರಪ್ಪನವರು ಇತ್ತೀಚೆಗೆ ತ್ರಿವರ್ಣ ಧ್ವಜದ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆಯನ್ನು ಕೊಟ್ಟಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ್ಯ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನಗಳ ಸಂಕೇತವಾಗಿದೆ. ಹಾಗಾಗಿ ಈಶ್ವರಪ್ಪನವರ ಹೇಳಿಕೆಯಿಂದ ದೇಶದ ಪ್ರಜೆಗಳಿಗೆ ದಿಗ್ಧಮೆಯಾಗಿದೆ. ಇದನ್ನು ವಿರೋಧಿಸಿ, ಈಶ್ವರಪ್ಪನವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿ, ಕಾಂಗ್ರೆಸ್ ಪಕ್ಷದ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿಯನ್ನು ಮಾಡುತ್ತಿದ್ದಾರೆ.
ರಾಷ್ಟ್ರಾಭಿಮಾನಿ ಜನ ದೇಶದ್ರೋಹದ ಹೇಳಿಕೆಗಳನ್ನು, ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ವಿಚಾರಗಳನ್ನು ಮತ್ತು ರಾಷ್ಟ್ರಲಾಂಛನಗಳಿಗೆ ಅಪಮಾನವನ್ನು ಸಹಿಸಲಾಗುವುದಿಲ್ಲ ಮತ್ತು ಇಂತಹ ಘಟನೆಗಳೊಂದಿಗೆ ರಾಜಿ ಮಾಡಿಕೊಳ್ಳುವ ವಿಷಯವೇ ಇರುವುದಿಲ್ಲ. ಹೀಗಿರುವಾಗ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವ್ಯಕ್ತಿಯೊಬ್ಬ ರಾಜ್ಯದ ಸಚಿವನಾಗಿರುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ.
ಈಶ್ವರಪ್ಪನವರ ಹೇಳಿಕೆಯ ವಿರುದ್ಧ ಮತ್ತು ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈಶ್ವರಪ್ಪನವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.