ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಪ್ರಸಿದ್ಧಿಯ ಆರ್. ಪ್ರಗ್ನಾನಂದ ಅವರು ವಿಶ್ವ ಚಾಂಪಿಯನ್, ನಂ.1 ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸೆನ್‌ಗೆ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಏರ್‌ಥಿಂಗ್ ಮಾಸ್ಟರ‍್ಸ್ 2022 ಆನ್‌ಲೈನ್ ಟೂರ್ನಿಯಲ್ಲಿ ಪ್ರಗ್ನಾನಂದ ಸಾಧನೆ ಮಾಡಿದ್ದು, ಪಂದ್ಯಾವಳಿಯಲ್ಲಿ ಕಾರ್ಲ್‌ಸೆನ್‌ರ ಮೂರನೇ ಸರಣಿ ಗೆಲುವಿಗೆ ಬ್ರೇಕ್ ಹಾಕಿದ್ದಾರೆ.
ಈ ಮೂಲಕ ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್‌ನ ಮೊದಲ ದಿನ ಕಠಿಣ ಸವಾಲು ಎದುರಿಸಿದ ನಂತರ ಕಾರ್ಲ್‌ಸೆನ್ ಇದೀಗ ಅತ್ಯಂತ ಕಿರಿಯ ಆಟಗಾರನ ಎದುರು ಹಿನ್ನಡೆ ಅನುಭವಿಸಿದ್ದಾರೆ.
ಸದ್ಯ ಪ್ರಗ್ನಾನಂದ ನಾಲ್ಕು ಸೋಲು ಹಾಗೂ ಎರಡು ಡ್ರಾ ಮೂಲಕ ಜಂಟಿ 12 ನೇ ಸ್ಥಾನದಲ್ಲಿದ್ದರೂ, ಮತ್ತೊಮ್ಮೆ ಗೆಲುವು ಸಾಧಿಸುವ ಹಾದಿಯಲ್ಲಿದ್ದಾರೆ.
ಮೂಲತಃ ತಮಿಳುನಾಡಿನ ಚೆನ್ನೈ ಮೂಲದವರಾದ ಪ್ರಗ್ನಾನಂದ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದ ದಾಖಲೆ ನಿರ್ಮಿಸಿದ್ದರು. 2018 ರಲ್ಲಿ ಗ್ರ್ಯಾಂಡ್ ಮಾಸ್ಟರ್ ಕೂಡ ಆಗಿದ್ದರು.