ವಿಟ್ಲ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುವ ಘಟನೆ ಮೇ 18ರ ರಾತ್ರಿ ನಡೆದಿದೆ.
ವಿಟ್ಲ ಸಮೀಪದ ಕುಡ್ತಮುಗೇರು ಪ್ರದೇಶದ ಹೊಳೆಯಿಂದ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ರಾಮಕೃಷ್ಣ ಪೊಲೀಸ್ ಉಪನಿರೀಕ್ಷಕರು (ಕಾ&ಸು) ಹಾಗೂ ಠಾಣಾ ಸಿಬ್ಬಂದಿ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಬೈರಿಕಟ್ಟೆ ಬಳಿ ವಾಹನ ತಡೆದು ಪರಿಶೀಲನೆ ನಡೆಸಿದರು.
ಈ ವೇಳೆ ವಾಹನದಲ್ಲಿ ಮರಳು ಲೋಡ್ ಮಾಡಿರುವುದು ಪತ್ತೆಯಾಯಿತು. ವಾಹನ ಚಾಲಕನಾದ ಬಂಟ್ವಾಳದ ಕೊಳ್ನಾಡು ನಿವಾಸಿ ರೆನೋಲ್ ಮೆಲ್ರೋಯ್ ಡಿಸೋಜ (31) ಅವರನ್ನು ವಿಚಾರಿಸಿದಾಗ, ಮರಳು ಸಾಗಾಟಕ್ಕೆ ಅಗತ್ಯ ಪರವಾನಿಗೆ ಅಥವಾ ದಾಖಲೆಗಳಿಲ್ಲದೇ ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಪಿಕ್‌ಅಪ್ ವಾಹನವನ್ನು ಮರಳಿನ ಸಮೇತ ವಶಪಡಿಸಿಕೊಂಡಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2026ರಂತೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2), ಎಂಎಂಡಿಆರ್ ಕಾಯ್ದೆ 1957ರ ಕಲಂ 4(1), 4(1A), 21 ಹಾಗೂ ಕರ್ನಾಟಕ ಮೈನರ್ ಮಿನರಲ್ ಕಾನ್ಸೆಷನ್ ರೂಲ್ಸ್ 1994ರ ಕಲಂ 3 ಮತ್ತು 44ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.



























