ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಶಾಲಾ ವಠಾರದಲ್ಲಿ ಮೇ 3, 2026ರಂದು ಬೆಳಿಗ್ಗೆ 11 ಗಂಟೆಯಿಂದ ಕಬಡ್ಡಿ ಕ್ರೀಡಾಭಿಮಾನಿಗಳಿಗೆ ರೋಚಕ ಕ್ರೀಡಾ ಹಬ್ಬ ಸಜ್ಜಾಗಿದೆ.
ಶ್ರೀರಾಮ್ ಪುತ್ತಿಲ (ರಿ.) ಅವರ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪುತ್ತೂರು ಇವರ ಸಹಯೋಗದಲ್ಲಿ ದಶಮಾನೋತ್ಸವದ ಅಂಗವಾಗಿ ವಿಶೇಷ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿ. ಮೋಹನ ನಾಯ್ಕ ಕೆದಗೇದಡಿ ಮ್ಯಾಟ್ ಅಂಕಣದಲ್ಲಿ ನಡೆಯುವ ಈ ಪಂದ್ಯಾಟದಲ್ಲಿ ವಲಯ ಮಟ್ಟದ ಹಾಗೂ ಅಂತರ್ ಜಿಲ್ಲಾ ಮಟ್ಟದ 60 ಕೆ.ಜಿ. ವಿಭಾಗದ ಸೂರ್ಯ ಬೆಳಕಿನ ಕಬಡ್ಡಿ ಸ್ಪರ್ಧೆಗಳು ನಡೆಯಲಿವೆ. ವಿವಿಧ ತಂಡಗಳ ಆಟಗಾರರು ತಮ್ಮ ಕೌಶಲ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನರಂಜನೆಗೈಯಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಬಡ್ಡಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಗುವುದು. ಸ್ಥಳೀಯ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಯೋಜಕರು ಮನವಿ ಮಾಡಿದ್ದಾರೆ.



























