ಪುತ್ತೂರು: ಅಖಿಲಭಾರತ ದೈವಾರಾಧಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ ದೈವಾರಾಧಕರ ವಿವಿಧ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಒಕ್ಕೂಟದ ಕೇಂದ್ರೀಯ ಉಪಾಧ್ಯಕ್ಷ ನವೀನ್ ಪಾತ್ರಿ ಮಾತನಾಡಿ, ರಾಜ್ಯದ 16 ವಿವಿಧ ವರ್ಗಗಳ ದೈವಾರಾಧಕರಿಗೆ ಸರ್ಕಾರಿ ಮಾನ್ಯತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ನಿವೃತ್ತ ದೈವಾರಾಧಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಅಥವಾ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಶಾಸಕರನ್ನು ಕೋರಿದ್ದೇವೆ ಎಂದು ಹೇಳಿದರು.
ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿನೋದ್ ಶೆಟ್ಟಿ ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನಪ್ರತಿನಿಧಿಗಳ ಗಮನಕ್ಕೆ ಹಲವು ಬಾರಿ ವಿಷಯವನ್ನು ತಂದಿದ್ದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ದೈವಾರಾಧನೆ ಪರಂಪರೆಯ ಪರವಾಗಿ ಸದನದಲ್ಲಿ ಧ್ವನಿ ಎತ್ತುತ್ತಿರುವ ಶಾಸಕ ಅಶೋಕ್ ರೈ ಅವರ ಮೇಲೆ ವಿಶ್ವಾಸವಿದ್ದು, ನಮ್ಮ ಬೇಡಿಕೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆಯಿಂದ ಅವರನ್ನು ಭೇಟಿ ಮಾಡಿದ್ದೇವೆ ಎಂದು ಹೇಳಿದರು.
ದೈವಾರಾಧಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕು ಹಾಗೂ ಸರ್ಕಾರ ಸೂಕ್ತ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಬೇಕು ಎಂಬುದೇ ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ವಾಸು ಶೇರಿಗಾರ್, ಸುಂದರ ಪೂಜಾರಿ, ಪ್ರಭಾಕರ್, ಸಮಿತ್ ಶೆಟ್ಟಿ, ಬಾಲಚಂದ್ರ ಪೂಜಾರಿ, ಕೃಷ್ಣ ಪೂಜಾರಿ (ಅಂಜಾರು), ರಾಮ ಸೇರಿದಂತೆ ಒಕ್ಕೂಟದ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.



























