ಮರ ಕಡಿಯುತಿದ್ದಾಗ ನಡೆದ ಅವಘಡದಲ್ಲಿ ತೊಡಿಕಾನ ಗ್ರಾಮದ ಚಾಂಬಾಡಿನ ಯುವಕ ಮಡಿಕೇರಿಯಲ್ಲಿ ಮೃತಪಟ್ಟಿರುವ ಘಟನೆ ಮೇ.18ರಂದು ಸಂಜೆ ವರದಿಯಾಗಿದೆ.
ತೊಡಿಕಾನ ಗ್ರಾಮದ ಚಾಂಬಾಡು ಐತಪ್ಪ – ಸೀತಾಲಕ್ಷ್ಮೀ ದಂಪತಿಯ ಪುತ್ರ ಕಿರಣ್ (26) ಮೃತ ಯುವಕ.
ಮರ ಕಡಿಯುವುವ ಕೆಲಸ ಮಾಡುತಿದ್ದ ಕಿರಣ್ ಮೇ.18ರಂದು ಮಡಿಕೇರಿಯ ಕೋಟೆರೋಡು ಎಂಬಲ್ಲಿ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಮರದ ಮೇಲೆ ಹತ್ತಿ ಮರವನ್ನು ಕಡಿಯುತಿದ್ದ ಸಂದರ್ಭ ಅವಘಡ ನಡೆದು ಕಿರಣ್ ರ ತಲೆಗೆ ಗಂಭೀರ ಗಾಯವಾಗಿ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.
ಮರ ಕಡಿಯುವ ಕೆಲಸದಲ್ಲಿ ನಿಪುಣರಾಗಿದ್ದ ಕಿರಣ್ ರ ಜತೆ ಆ ಕೆಲಸದ ತಂಡವೇ ಇದೆ. ಆದರೆ ಮಡಿಕೇರಿಗೆ ಹೋಗಿದ್ದ ಸಂದರ್ಭ ಇವರೊಬ್ಬರೇ ಬೇರೆಯವರೊಂದಿಗೆ ಹೋಗಿದ್ದರೆಂದು ತಿಳಿದುಬಂದಿದೆ
ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದ್ದು ಪೋಸ್ಟ್ ಮಾರ್ಟಂ ಆದ ಬಳಿಕ ಮನೆಯವರಿಗೆ ಹಸ್ತಾಂತರ ನಡೆಯುವುದೆಂದು ತಿಳಿದುಬಂದಿದೆ.
ಮೃತ ಕಿರಣ್ ತಂದೆ, ತಾಯಿ, ಪತ್ನಿ, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.



























