ವಿಟ್ಲ : ಪ್ರತಿನಿತ್ಯ ಅಪಘಾತಗಳು ನಡೆಯುತ್ತಾ ಹಲವರ ಸಾವು-ನೋವುಗಳಿಗೆ ಕಾರಣವಾಗುತ್ತಿರುವ ವಿಟ್ಲದ ಕಾಶಿಮಠದಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ವಾಹನ ಸವಾರರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬೇಕೆಂದು ಜನರು ಒತ್ತಾಯಿಸಿದ್ದಾರೆ.
ವಿಟ್ಲ-ಕಾಸರಗೋಡು ರಸ್ತೆಯ ಸರಕಾರಿ ಬಸ್ ನಿಲ್ದಾಣದಿಂದ ಉಕ್ಕುಡ ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಜಟಾಧಾರಿ ದೈವಸ್ಥಾನ ಮುಂದಿನ ಅಪಾಯಕಾರಿ ರಸ್ತೆ ತಿರುವಿನಿಂದ ಕಾಶಿಮಠ ತನಕ ಅಪಘಾತ ವಲಯವಾಗಿದ್ದು ಈವರೆಗೆ ಏಳು ಜನರು ಪ್ರಾಣತೆತ್ತಿದ್ದಾರೆ.
ಮರುಕಳಿಸುತ್ತಿರುವ ಅಪಘಾತವನ್ನು ತಡೆಯುವುದಕ್ಕಾಗಿ ತಕ್ಷಣವೇ ಎರಡು ಕಡೆಗಳಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ವಾಹನ ಸವಾರರ ನಿರ್ಲಕ್ಷ್ಯಕ್ಕೆ ಪೊಲೀಸರು ಕಡಿವಾಣ ಹಾಕಬೇಕೆಂದು ಜನ ಒತ್ತಾಯಿಸಿದ್ದಾರೆ.



























