ಉಕ್ರೇನ್ ಮೇಲೆ ಪುಟಿನ್ ಸೇನೆಯ ಆಕ್ರಮಣದಿಂದ ಉಕ್ರೇನ್ ಅಕ್ಷರಶಃ ಜರ್ಜರಿತವಾಗ್ತಿದೆ. ಪರಿಣಾಮ ಉಕ್ರೇನಿಯನ್ ಪ್ರಜೆಗಳು ಮಾತ್ರವಲ್ಲ, ಅಲ್ಲರುವ ವಿದೇಶಿಗರೂ ಕೂಡ ರಣವ್ಯೂಹದ ಸುಳಿಗೆ ಸಿಲುಕಿ ಬದುಕು ಕಳೆದುಕೊಳ್ತಿದ್ದಾರೆ. ಜೀವ ಇದ್ದರೆ ಸಾಕು ಅಂತಾ ಪ್ರಾಣ ಉಳಿಸಿಕೊಳ್ಳಲು ಉಕ್ರೇನಿಯರು ವಿದೇಶಗಳಿಗೆ ಪಲಾಯನ ಮಾಡ್ತಿದ್ರೆ, ಅಲ್ಲಿರುವ ವಿದೇಶಿಗರು ತಾಯ್ನಾಡಿಗೆ ಮರಳಲು ಪ್ರಯತ್ನ ಮಾಡ್ತಿದ್ದಾರೆ. ವಿಷಯ ಏನಂದ್ರೆ ರಷ್ಯಾ ಮತ್ತು ಉಕ್ರೇನ್ ನಡುವಿನ ರಣ ಭೀಕರ ಯುದ್ಧದ ಭೀಕರ ವಾತಾವರಣದ ಮಧ್ಯೆಯೂ ಚೀನಾ ಮತ್ತು ಅಮೆರಿಕಗೆ ಸಾಧ್ಯವಾಗದ ವಿಶೇಷ ಸಾಧನೆಯನ್ನ ಭಾರತ ಮಾಡಿದೆ.
ಇಂದು ಸಂಜೆ ವೇಳೆಗೆ 3726 ವಿದ್ಯಾರ್ಥಿಗಳು ತಾಯ್ನಾಡಿಗೆ:
ರಷ್ಯಾದ ರಕ್ಕಸ ದಾಳಿಯಿಂದ ಭಾರತೀಯ ವಿದ್ಯಾರ್ಥಿಗಳ ಪಾರು ಮಾಡಲು ಭಾರತ ಸರ್ಕಾರ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಶುರುಮಾಡಿದೆ. ಕೇಂದ್ರ ಸರ್ಕಾರದ ಶತತ ಪ್ರಯತ್ನದ ಫಲವಾಗಿ, ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ಮರಳಿ ನಿಟ್ಟುಸಿರು ಬಿಡುತ್ತಿದ್ದಾರೆ. ಅದರಂತೆ ಇಂದು ಇಂದು ಸಂಜೆ ವೇಳೆಗೆ ಒಟ್ಟು 19 ವಿಮಾನಗಳು, 3726 ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆದುಕೊಂಡು ಬರಲಿವೆ. ಇದೇ ರೀತಿ ಅಮೆರಿಕ ಹಾಗೂ ಚೀನಾ ಕೂಡ ತಮ್ಮ ವಿದ್ಯಾರ್ಥಿಗಳನ್ನ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದೆ.
8ನೇ ದಿನಕ್ಕೆ ಕಾಲಿಟ್ಟ ಘೋರ ಯುದ್ಧ:
ಚೀನಾ-ಅಮೆರಿಕ ತಮ್ಮ ನಾಗರಿಕರನ್ನ ಕರೆದುಕೊಂಡು ಬರಲು ನಿರೀಕ್ಷೆಯ ಪ್ರಮಾಣದಲ್ಲಿ ವಿಫಲವಾಗಿವೆ. ಯಾಕಂದ್ರೆ ಅಲ್ಲಿ ನಡೆಯುತ್ತಿರುವ ಯುದ್ಧದ ಭೀಕರತೆ. ಯುದ್ಧ ಶುರುವಾಗಿ ನಿನ್ನೆಗೆ 7 ದಿನ ಕಳೆದಿದೆ. ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಒಂದು ವಾರಗಳ ಅವಧಿಯಲ್ಲಿ, ಉಕ್ರೇನ್ ಪ್ರಮುಖ ನಗರಳಲ್ಲಿ ಗುಂಡಿನ ಸದ್ದು, ಬಾಂಬ್ ಸ್ಫೋಟ, ಏರ್ಸ್ಟ್ರೈಕ್ಗಳ ಆರ್ಭಟ ಜೋರಾಗಿದೆ. ಕೆಲವು ವರದಿಗಳ ಪ್ರಕಾರ ಪ್ರತಿ 20 ನಿಮಿಷಕ್ಕೊಂದರಂತೆ ರಷ್ಯಾ ಸೇನೆ ಉಕ್ರೇನ್ನಲ್ಲಿ ಸ್ಫೋಟ ನಡೆಸ್ತಿದೆಯಂತೆ. ಹೀಗಿದ್ದೂ ಭಾರತ 6 ಗಂಟೆಗಳ ಕಾಲ ಈ ರಣ ಭೀಕರ ಯುದ್ಧವನ್ನ ನಿಲ್ಲಿಸಿದೆ ಅಂದರೆ ತಪ್ಪಾಗಲ್ಲ.
6 ಗಂಟೆ ಯುದ್ಧ ನಿಲ್ಲಿಸಿದ ಭಾರತ..?
ಹೌದು.. ಕೆಲವು ವರದಿಗಳ ಪ್ರಕಾರ, ಖಾರ್ಕಿವ್ನಲ್ಲಿ ನಿನ್ನೆ ರಷ್ಯಾ ಸೇನೆ ಸ್ನೇಹಿತ ಭಾರತಕ್ಕಾಗಿ 6 ಗಂಟೆಗಳ ಕಾಲ ಯುದ್ಧ ಕಾರ್ಯಾಚರಣೆಯನ್ನ ನಿಲ್ಲಿಸಿದ್ಯಂತೆ. ಖಾರ್ಕಿವ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಹೋಗುವವರೆಗೆ ರಷ್ಯಾ ಯಾವುದೇ ಶೆಲ್ ಅಥವಾ ಭೀಕರ ದಾಳಿಗಳನ್ನ ನಡೆಸಿಲ್ಲವಂತೆ. ಜನ ವಸತಿ ಪ್ರದೇಶಗಳಿಂದ ಬೇರೆಕಡೆ ಹೋಗಲು ಅನುವು ಮಾಡಿಕೊಡುವ ಉದ್ದೇಶದಿಂದ ಯಾವುದೇ ಅಟ್ಯಾಕ್ ಮಾಡಿಲ್ಲ. ಖಾರ್ಕಿವ್ನ ಡೇಂಜರಸ್ ಪ್ರದೇಶದಿಂದ ಭಾರತೀಯ ವಿದ್ಯಾರ್ಥಿಗಳು ತೆರಳಿದ ಬಳಿಕ ರಷ್ಯಾ ತನ್ನ ಕಾರ್ಯಾಚರಣೆಯನ್ನ ಮತ್ತೆ ಮುಂದುವರಿಸಿದೆ ಎನ್ನಲಾಗಿದೆ.
ಇದೆಲ್ಲಾ ಹೇಗೆ ಸಾಧ್ಯ..?
ಈ ಬಗ್ಗೆ ಅಧಿಕೃತ ವರದಿಗಳು ಬಾರದಿದ್ದರೂ ಕೂಡ ರಷ್ಯಾ 6 ಗಂಟೆಗಳ ಕಾಲ ಯುದ್ಧ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ನಂಬಲಾಗುತ್ತಿದೆ. ಅಂದ್ಹಾಗೆ ಭಾರತ ಹಾಗೂ ರಷ್ಯಾ ಮೊದಲಿನಿಂದಲೂ ಉತ್ತಮ ಸ್ನೇಹಿತರು. ಇದೇ ಕಾರಣಕ್ಕೆ ವಿಶ್ವ ಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಕೈಗೊಳ್ಳುವಾಗ ಭಾರತ ಗೈರಾಗುತ್ತಿದೆ. ರಷ್ಯಾದ ಯುದ್ಧದ ನಡೆಯನ್ನ ಭಾರತ ವಿರೋಧಿಸುತ್ತ ಬಂದಿದೆ. ಹೀಗಿದ್ದೂ ರಷ್ಯಾ ಮತ್ತು ಭಾರತ ಸ್ನೇಹಕ್ಕೆ ಯಾವುದೇ ಭಂಗ ಬಂದಿಲ್ಲ. ಯುದ್ಧ ಆರಂಭವಾದ ಬಳಿಕ ರಷ್ಯಾ ಅಧ್ಯಕ್ಷ ಹಾಗೂ ಮೋದಿ ಎರಡ್ಮೂರು ಬಾರಿ ದೂರವಾಣಿ ಮೂಲಕ ಮಾತುಕತೆ ಕೂಡ ನಡೆಸಿದ್ದಾರೆ. ನಿನ್ನೆ ಕೂಡ ಮೋದಿ ಪುಟಿನ್ ಜೊತೆ ಮಾತುಕತೆ ನಡೆಸಿ, ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಮಾತನ್ನಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.