ಸಿಂಧ್: ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದ್ದು,18 ವರ್ಷದ ಹಿಂದೂ ಯುವತಿಯನ್ನು ಅಪಹರಿಸಲು ನಡೆಸಿದ ಯತ್ನ ವಿಫಲಗೊಂಡಿದ್ದು, ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ರೋಹಿ ಸುಕ್ಕೂರ್‌ನಲ್ಲಿ ಅಪಹರಿಸಲು ಯತ್ನಿಸಿದಾಗ ದಾಳಿಕೋರರಿಗೆ ತೀವ್ರ ಪ್ರತಿರೋಧ ತೋರಿದ ಕಾರಣ ‘ಪೂಜಾ ಓಡ್ ‘ ಎಂಬ ಯುವತಿಯನ್ನು ರಸ್ತೆಯ ಮಧ್ಯದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಪ್ರತಿ ವರ್ಷ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಹಲವಾರು ಮಹಿಳೆಯರನ್ನು, ವಿಶೇಷವಾಗಿ ಸಿಂಧ್‌ನಲ್ಲಿ ಹಿಂದೂಗಳನ್ನು ಧಾರ್ಮಿಕ ಉಗ್ರಗಾಮಿಗಳು ಅಪಹರಿಸಿ ಬಲವಂತವಾಗಿ ಮತಾಂತರಿಸುತ್ತಿದ್ದಾರೆ.
ಹಿಂದೂಗಳು ಪಾಕಿಸ್ತಾನದಲ್ಲಿ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಅಧಿಕೃತ ಅಂದಾಜಿನ ಪ್ರಕಾರ ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಆದರೆ ಸಮುದಾಯದ ಪ್ರಕಾರ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೇಶದಲ್ಲಿ ವಾಸಿಸುತ್ತಿದ್ದಾರೆ.
ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ , ಪಾಕಿಸ್ತಾನದಲ್ಲಿ ಹಿಂದೂ ಸಮುದಾಯದ ಒಟ್ಟಾರೆ ಜನಸಂಖ್ಯೆಯನ್ನು 1.60 ಪ್ರತಿಶತ ಮತ್ತು ಸಿಂಧ್‌ನಲ್ಲಿ ಕ್ರಮವಾಗಿ 6.51 ಪ್ರತಿಶತ ಎಂದು ವರದಿ ಮಾಡಿದೆ.



























