ನವದೆಹಲಿ: 60 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಎರಡು ಟೋಲ್‌ಬೂತ್‌ಗಳಿದ್ದರೆ ಆ ಪೈಕಿ ಒಂದನ್ನು ಮುಚ್ಚುವ ಪ್ರಸ್ತಾಪವಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಿನ್ನೆ ಸದನದಲ್ಲಿ ಮಾತನಾಡಿದ ಅವರು ‘ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ. ಮೀ. ವ್ಯಾಪ್ತಿಯೊಳಗೆ ಎರಡು ಟೋಲ್ ಬೂತ್‌ಗಳಿದ್ದರೆ ಒಂದನ್ನು ಮೂರು ತಿಂಗಳಿನಲ್ಲಿ ಮುಚ್ಚಲಾಗುತ್ತದೆ ಎಂದು ಸಚಿವಾಲಯವು ಕೂಡಾ ದೃಢಪಡಿಸಿದೆ.
2022-23ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಕುರಿತು ಲೋಕಸಭೆಯಲ್ಲಿ ಉತ್ತರಿಸಿ 60 ಕಿ. ಮೀ. ವ್ಯಾಪ್ತಿಯಲ್ಲಿ ಕೇವಲ ಒಂದು ಟೋಲ್ ಬೂತ್ ಇರಬೇಕು. ಎರಡು ಟೋಲ್ ಬೂತ್ ಇರುವ ಕಡೆ ಅವುಗಳನ್ನು ಮುಂದಿನ 3 ತಿಂಗಳಲ್ಲಿ ಮುಚ್ಚಲಾಗುವುದು’ ಎಂದು ಹೇಳಿದ್ದಾರೆ.
ಸಚಿವರು ನೀಡಿರುವ ಈ ಅಧಿಕೃತ ಹೇಳಿಕೆಯಿಂದಾಗಿ ಸುರತ್ಕಲ್ ಟೋಲ್‌ಗೇಟ್ ಕೂಡಾ ರದ್ದಾಗುವ ವಿಶ್ವಾಸ ಮೂಡಿದೆ. ಸುರತ್ಕಲ್ ತಾತ್ಕಾಲಿಕ ಟೋಲ್‌ಗೇಟ್ ರದ್ದುಪಡಿಸಬೇಕೆಂದು ಆಗ್ರಹಿಸಿ ಈ ಹಿಂದೆ ಇಲ್ಲಿ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು.
ಕೆಲವು ದಿನಗಳ ಹಿಂದೆ ಆಸೀಫ್ ಆಪತ್ಭಾಂದವ ಕೂಡಾ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಹೆಜಮಾಡಿ ಮತ್ತು ಸುರತ್ಕಲ್ ಟೋಲ್‌ಗೇಟ್ ಕೆಲವೇ ಅಂತರದಲ್ಲಿ ನಿರ್ಮಿಸಲಾಗಿದ್ದು, ಟೋಲ್ ಶುಲ್ಕವನ್ನು ಹಲವು ವರ್ಷಗಳಿಂದ ಪಡೆದುಕೊಳ್ಳಲಾಗುತ್ತಿದೆ.
ನಿನ್ನೆ ಹೆಜಮಾಡಿ ಟೋಲ್‌ಗೇಟಿನಿಂದ ಸುರತ್ಕಲ್ ಟೋಲ್‌ಗೇಟ್ ವರೆಗೆ ಪ್ರತಿಭಟನೆ ನಡೆದು ಈ ಟೋಲ್‌ಗೇಟನ್ನು ರದ್ದುಪಡಿಸಬೇಕೆಂದು ಆಗ್ರಹಿಸಲಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಧಿಕ್ಕಾರವನ್ನೂ ಕೂಗಿದ್ದರು.




























