ಬೆಂಗಳೂರು: ನಗರದ ಸುಂಕದಕಟ್ಟೆಯಲ್ಲಿ ಪತಿಯಿಂದ ಪತ್ನಿ ಕೊಲೆ (Murder) ನಡೆದಿದೆ.
ಪತಿ ಯೋಗೀಶ್ನಿಂದ ಪತ್ನಿ ಸೌಮ್ಯ ಕೊಲೆಯಾಗಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದಂಪತಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಗಂಡ- ಹೆಂಡತಿ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಹಣಕಾಸು ವಿಚಾರಕ್ಕೆ ಹಲವಾರು ಬಾರಿ ಗಲಾಟೆ ಮಾಡಿಕೊಂಡಿದ್ದರು. ವರದಕ್ಷಿಣೆ (Dowry) ಹಣ ತರುವಂತೆ ಗಂಡ ಪೀಡಿಸುತ್ತಿದ್ದನಂತೆ. ಹೀಗಾಗಿ ಸೌಮ್ಯ ತವರು ಮನೆಯಿಂದ ಎರಡು ಬಾರಿ ಹಣ ತಂದು ಕೊಟ್ಟಿದ್ದಳಂತೆ.
ಡ್ರೈವಿಂಗ್ ಕೆಲಸ ಮಾಡುತ್ತಿರುವ ಪತಿ ಯೋಗೀಶ್ ಇನ್ನೂ ಹಣ ಬೇಕು ಅಂತ ಮೂರು ದಿನಗಳ ಹಿಂದೆ ಹೆಂಡತಿ ಜೊತೆ ಗಲಾಟೆ ಮಾಡಿದ್ದಾನೆ. ಎರಡು ಲಕ್ಷ ಹಣ ತೆಗೆದುಕೊಂಡು ಬಾ ಎಂದು ಕಿರಿಕ್ ಮಾಡಿದ್ದಾನೆ. ನಿನ್ನೆ ಸಂಜೆ ಮನೆಯಲ್ಲಿ ಮತ್ತೆ ಜಗಳ ಮಾಡಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

























