ಕಾರವಾರ : ಇತ್ತೀಚೆಗೆ ಪದೇ ಪದೇ ಬಲು ಅಪರೂಪ ಕಾಣಸಿಗುವ ಡಾಲ್ಫಿನ್ ಮೀನಿನ ಮೃತದೇಹ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡುಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದಲ್ಲಿನ ಕಾಂಚಿಕಾ ಪರಮೇಶ್ವರೀ ದೇವಸ್ಥಾನ ಬಳಿಯ ಕಡಲ ತೀರದಲ್ಲಿ ಇಂಡೋ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಮೃತದೇಹವೊಂದು ಪತ್ತೆಯಾಗಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ನೀಡಿದ್ದು, ಈ ಡಾಲ್ಫಿನ್ ಮೀನು 6ದಿನಗಳ ಹಿಂದೆ ಸತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಸುಮಾರು 2.25 ಮೀಟರ್ ಉದ್ದದ 230 ಕೆಜಿ ತೂಕದ ಇಂಡೋ ಪೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಮೃತದೇಹ ಇದಾಗಿದ್ದು ಶಾರ್ಕ್ ದಾಳಿ ಅಥವಾ ಬೋಟ್ ಬರುವ ರಭಸಕ್ಕೆ ಹೊಡೆದು ಗಾಯವಾಗಿ ಸತ್ತಿರುವುದಾಗಿ ಅಂದಾಜಿಸಲಾಗಿದೆ. ಮೂರು ದಿನದ ಹಿಂದಷ್ಟೇ ಈ ಭಾಗದಲ್ಲಿ ಡಾಲ್ಫಿನ್ ಮೃತದೇಹ ಪತ್ತೆಯಾಗಿತ್ತು. ಇದೀಗ ಮತ್ತೆ ಇದೇ ಭಾಗದಲ್ಲಿ ಇನ್ನೊಂದು ಅಪರೂಪದ ಡಾಲ್ಫಿನ್ ಮೀನು ಸತ್ತು ಬಿದ್ದಿರುವುದು ಆತಂಕಕ್ಕೀಡುಮಾಡಿದೆ. ಲಾಕ್ ಡೌನ್ ಸಂದರ್ಭ ಇಲ್ಲಿ ಡಾಲ್ಫಿನ್ ಗಳ ಓಡಾಟ ಇರುವಿಕೆ ಹೆಚ್ಚಾಗಿದ್ದುದನ್ನು ಅರಣ್ಯ ಅಧಿಕಾರಿಗಳು ಗಮನಿಸಿದ್ದರು.
10ರಿಂದ 12 ತಿಂಗಳಲ್ಲಿ ಗರ್ಭಧಾರಣೆ ಮಾಡುವ ಇವು 20-25ಮೀಟರ್ ಆಳ ಸಮುದ್ರದಲ್ಲಿ ವಾಸಿಸುತ್ತವೆ.ಕೆಲವೊಮ್ಮೆ 15-20ಸೆಕೆಂಡ್ ನಷ್ಟು ಸಮುದ್ರದಿಂದ ಮೇಲಕ್ಕೆ ಹಾರಿ ಮತ್ತೆ ಸಮುದ್ರದಲ್ಲಿ ಮುಳುಗಿ ಬಳಿಕ ಆಹಾರವನ್ನರಸಿ ಶಿಕಾರಿಗಿಳಿಯುತ್ತವೆ. ಡಾಲ್ಫಿನ್ ಸಸ್ತನಿಯಾಗಿದ್ದು, ಸಮುದ್ರ ತೀರದಲ್ಲಿ ಜನರ ಓಡಾಟ ಹೆಚ್ಚಾದ ಹಿನ್ನಲೆಯಲ್ಲಿ ಇವುಗಳು ಕಡಲ ತೀರದಲ್ಲಿ ಹೆಚ್ಚಾಗಿ ಕಂಡು ಬರುತ್ತಿರಲಿಲ್ಲ ಇವುಗಳ ಇರುವಿಕೆಯ ಸ್ಥಳವನ್ನು ಬದಲಿಸಿದ್ದವು. ಲಾಕ್ ಡೌನ್ ನಂತರ ಡಾಲ್ಫಿನ್ ಗಳ ದಂಡು ಅರಬ್ಬೀ ಸಮುದ್ರ ತೀರದ ಕುಮಟಾ ಸೇರಿದಂತೆ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು. ಇದೀಗ ಮೀನುಗಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳು ಹೆಚ್ಚಾಗಿರುವುದು ಡಾಲ್ಫಿನ್ ಮೀನುಗಳ ಇರುವಿಕೆಗೆ ಹೊಡೆತ ನೀಡಿದಂತಾಗಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.