ಬೆಂಗಳೂರು: ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆ ಒತ್ತಡದಲ್ಲಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಶೀಘ್ರವೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಲಿನ ದರ ಏರಿಸಲು 1 ತಿಂಗಳಿಂದ ನಿರಂತರ ಸರ್ಕಸ್ ಮಾಡಲಾಗುತ್ತಿದೆ. ಈಗಾಗಲೇ KERC ವಿದ್ಯುತ್ ದರ ಏರಿಕೆಗೆ ಅಸ್ತು ಎಂದಿದೆ. ಹೀಗಾಗಿ ಈಗ ಹಾಲಿನ ದರ ಏರಿಸಲು ಹಾಲು ಒಕ್ಕೂಟಗಳು ಪಟ್ಟು ಹಿಡಿದಿವೆ.
ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು ಒತ್ತಾಯ ಕೇಳಿ ಬಂದಿದೆ. ಪ್ರತಿ ಲೀ.ಗೆ 5 ರೂ. ಏರಿಸಲು ಹಾಲು ಒಕ್ಕೂಟಗಳು ಮನವಿ ಮಾಡಿವೆ. 14 ಹಾಲು ಒಕ್ಕೂಟಗಳು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಲು ಸಿದ್ದತೆ ಮಾಡಿಕೊಂಡಿವೆ. ಇದೇ ಏಪ್ರಿಲ್ 10ರೊಳಗೆ ಬೊಮ್ಮಾಯಿ ಭೇಟಿ ಮಾಡಲು ನಿರ್ಧಾರ ಮಾಡಿವೆ. ಈಗಾಗಲೇ ಈ ಬಗ್ಗೆ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜೊತೆ ಚರ್ಚೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿಎಂ ಜತೆಗೆ ಚರ್ಚೆ ಮಾಡುವ ಭರವಸೆ.
14 ಹಾಲು ಒಕ್ಕೂಟಗಳು ಪ್ರತಿ ಲೀ.ಗೆ 5 ರೂ. ಏರಿಸಲು ಮನವಿ ಮಾಡಿವೆ. ಆದ್ರೆ KMF ಪ್ರತಿ ಲೀ.ಗೆ 2 ರೂ. ಮಾತ್ರ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆಗೆ ಸಿಎಂ ಒಪ್ಪಿದರೆ ಹಾಲಿನ ದರ ಏರಿಕೆಯಾಗಲಿದೆ.
ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಸಿಲಿಂಡರ್, ವಿದ್ಯುತ್ ಬಿಲ್ ದರವೂ ದುಬಾರಿಯಾಗಿದೆ. ನಷ್ಟ ಹಾಗೂ ನಿರ್ವಹಣೆ ವೆಚ್ಚ ದುಬಾರಿ ಕಾರಣ ನೀಡಿ ದರ ಏರಿಕೆಗೆ KMF ಮುಂದಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸಿದ್ರೆ ಹಾಲಿನ ದರವೂ ದುಬಾರಿಯಾಗಲಿದೆ.