ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಯಮಾನ್ ಅಲ್ಜವಾಹಿರಿ, ಕರ್ನಾಟಕದ ಮಂಡ್ಯ ಜಿಲ್ಲೆಯ ವಿದ್ಯಾರ್ಥಿನಿ ಬಿಬಿ ಮುಸ್ಕಾನ್ ಝೈನಬ್ ಖಾನ್ಗೆ ಬೆಂಬಲ ಸೂಚಿಸಿ ಕವನ ಓದಿದ್ದಾನೆ. ಭಾರತದ ಉದಾತ್ತ ಮಹಿಳೆ. ಭಾರತದ ಧೈರ್ಯಶಾಲಿ ಮಹಿಳೆ ಎಂದು ಉಗ್ರ ಕೊಂಡಾಡಿದ್ದಾನೆ.
ಒಂಬತ್ತು ನಿಮಿಷಗಳ ವಿಡಿಯೋ ರಿಲೀಸ್ ಮಾಡಿ ಆಕೆಯನ್ನ ಹಾಡಿ ಹೊಗಳಿರುವ ಅಲ್-ಖೈದಾ ಮುಖ್ಯಸ್ಥ, ಆಕೆಯ ಬಗ್ಗೆ ಕವನ ಒಂದನ್ನ ರಚಿಸಿ ಹಾಡಿದ್ದಾನೆ.
‘ಭಾರತದ ಗಣ್ಯ ಮಹಿಳೆ’ ಎಂಬ ಶೀರ್ಷಿಕೆಯ ಪೋಸ್ಟರ್ ಒಳಗೊಂಡಿರುವ ವಿಡಿಯೋದಲ್ಲಿ ಜವಾಹಿರಿ, ಮುಸ್ಕಾನ್‌ಳನ್ನು ಶ್ಲಾಘಿಸಿ ಕವನ ಓದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಿಂದ ಮುಸ್ಕಾನ್ ಬಗ್ಗೆ ಗೊತ್ತಾಗಿದೆ. ‘ಒಬ್ಬ ಸಹೋದರಿಯ’ ನಡೆಯಿಂದ ಮತ್ತು ಆಕೆಯ ತಕ್ಬೀರ್ ಕೂಗಿನಿಂದ ಮನದುಂಬಿದೆ ಎಂದು ಕವನ ಓದಿದ್ದಾನೆ.
ಯಾರು ಈ ವಿದ್ಯಾರ್ಥಿನಿ..?
ಮುಸ್ಕಾನ್ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ರಾಜ್ಯದಲ್ಲಿ ಇತ್ತೀಚೆಗೆ ಹಿಜಾಬ್ ವಿವಾದ ಜೋರಾಗಿ ಕೇಳಿಬಂದಿತ್ತು. ಈ ಸಂದರ್ಭದಲ್ಲಿ ಹಿಜಾಪ್ ಪರ ಪ್ರತಿಭಟನೆ ನಡೆಸಿದ್ದ ಯುವತಿ, ಜೋರಾಗಿ ‘ಅಲ್ಲಹು ಅಕ್ಬರ್’ ಎಂದು ಧಾರ್ಮಿಕ ಘೋಷಣೆಯನ್ನ ಕೂಗಿದ್ದಳು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ನಂತರ ಯುವತಿಯ ಧೈರ್ಯವನ್ನ ಹಿಜಾಬ್ ಪರ ಇರೋರು ಮುಕ್ತ ಕಂಠದಿಂದ ಶ್ಲಾಘಿಸಿ ಬಹುಮಾನವನ್ನ ಘೋಷಣೆ ಮಾಡಿದ್ದರು.