ಬೆಳ್ತಂಗಡಿ: ಇಲ್ಲಸಲ್ಲದ ಆರೋಪ ಹೊರಿಸಿ ತನ್ನ ತಂದೆಯ ಸಾವಿಗೆ ಕಾರಣರಾದ ಸ್ಕ್ಯಾಡ್ ಅಧಿಕಾರಿ ಸಂಧ್ಯಾರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಂದೆಯ ಶವವನ್ನು ಠಾಣೆಯ ಎದುರಿಟ್ಟು ಮಕ್ಕಳು ಪ್ರತಿಭಟನೆ ನಡೆಸಿದ ಘಟನೆ ಕುವೆಟ್ಟು ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿದೆ.
ಕುವೆಟ್ಟು ಗ್ರಾಮದ ಬದ್ಯಾರು ನಿವಾಸಿ ನಾಯ್ಕರವರು ಕುವೆಟ್ಟು ಗ್ರಾಮದ 156/1ಬಿ ರಲ್ಲಿ 2 ಎಕ್ರೆ ಸ್ಥಳವಿದ್ದು ಸುಮಾರು 60 ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದು ಸ್ಥಳದಲ್ಲಿ ಕೃಷಿಯ ಜೊತೆಗೆ ಇತರ ಕಾಡು ಜಾತಿ ಮರಗಳನ್ನು ನೆಟ್ಟು ಬೆಳೆಸಿರುತ್ತಾರೆ. ಜ.4 ರಂದು ಮಂಗಳೂರಿನ ಸ್ಕ್ವಾಡ್ ನ ಅಧಿಕಾರಿಗಳುಎಂದು ಹೇಳಿಕೊಂಡು ಬಂದ ಸಂಧ್ಯಾ ಹಾಗೂ ಇತರ ನಾಲ್ಕು ಅಧಿಕಾರಿಗಳು ರಾಮ ನಾಯ್ಕ ರ ಬಳಿ ಬಂದು ದಾಸ್ತಾನು ಇಟ್ಟ ಮರಗಳನ್ನು ಮರಗಳ್ಳರ ಜೊತೆ ಸೇರಿಕೊಂಡು ಮಾರಾಟ ಮಾಡುತ್ತಿದ್ದೀರಿ ಎಂದು ಸುಳ್ಳು ಆರೋಪ ಹೊರಿಸಿ ಹಾಗೆಯೇ ಹೇಳಿಕೆ ನೀಡಬೇಕು ಎಂದು ರಾಮ ನಾಯ್ಕರಲ್ಲಿ ಒತ್ತಾಯಿಸಿರುತ್ತಾರೆ.
ನಾವು ಯಾವುದೇ ಮರಗಳನ್ನು ಮಾರಾಟ ಮಾಡುತ್ತಿಲ್ಲ ಕೃಷಿ ಅಭಿವೃದ್ಧಿಗಾಗಿ ಮಾತ್ರ ಹಕ್ಕಿನ ಜಾಗದಿಂದ ಮರಗಳನ್ನು ತೆರವುಗೊಳಿಸಿರುವುದು ಅಲ್ಲದೆ ಯಾವುದೇ ಮರಗಳ್ಳರಿಗೆ ಮಾರಾಟದ ಉದ್ದೇಶದಿಂದಲ್ಲ ಎಂದು ಹೇಳಿದರೂ ಸಹ ಸ್ಕ್ವಾಡ್ ನ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ಬೈದಿರುವುದು ಮಾತ್ರ ಅಲ್ಲದೆ ಜೀವ ಬೆದರಿಕೆ ನೀಡಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದಾರೆ ಮತ್ತು ಅವರ ಮೇಲೆ ಪ್ರಕರಣ ದಾಖಲಿಸುವುದಾಗಿಯೂ, ಪ್ರಕರಣವನ್ನು ಮುಗಿಸಲು 10 ಲಕ್ಷ ಹಣ ನೀಡಬೇಕೆಂದು ಬೆದರಿಸಿದ್ದಾರೆ ಇದರಿಂದ ಮನನೊಂದು ರಾಮ ನಾಯ್ಕ ರವರು ಅಸೌಖ್ಯದಿಂದ ಹಾಸಿಗೆ ಹಿಡಿದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಂಧ್ಯಾರವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಮತ್ತು ತಂದೆಯ ಸಾವಿಗೆ ಕಾರಣರಾದ ಸಂಧ್ಯಾ ರವರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು, ಜೀವನಾಂಶ ಕೊಟ್ಟು ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.