ಬಂಟ್ವಾಳ: ಕೃಷಿ ಬಳಕೆಯ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಕೈಗಾರಿಕಾ ಬಳಕೆಯ ತಾಂತ್ರಿಕ ಗ್ರೇಡ್ ಚೀಲಗಳಿಗೆ ಮರುಪೊಟ್ಟಣಿಕೆ ಮಾಡಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ವಿಟ್ಲ ಪೊಲೀಸರು ಬಯಲಿಗೆಳೆದಿದ್ದಾರೆ.
ಜೂನ್ 11ರಂದು ಸಂಜೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬೊಳಂತೂರು ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ವೇಳೆ ಮೊಹಮ್ಮದ್ ಅಶ್ರಫ್ ಎಂಬಾತ ತನ್ನ ಮನೆಯ ಸಮೀಪ ಕೃಷಿ ಗ್ರೇಡ್‌ನ ಯೂರಿಯಾ ರಸಗೊಬ್ಬರವನ್ನು ಕೈಗಾರಿಕಾ ಬಳಕೆಯ ತಾಂತ್ರಿಕ ಗ್ರೇಡ್ ಚೀಲಗಳಿಗೆ ಮರುಪೊಟ್ಟಣಿಕೆ ಮಾಡಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಅಂದಾಜು 632 ಚೀಲಗಳಷ್ಟು ಯೂರಿಯಾ ರಸಗೊಬ್ಬರವನ್ನು ಮರುಪೊಟ್ಟಣಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ನಂದನ ಶೆಣೈ ಪಿ. (ತಾಂತ್ರಿಕ) ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೃಷಿ ಅಧಿಕಾರಿಗಳ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ. 127/2026 ಪ್ರಕರಣವನ್ನು ದಾಖಲಿಸಲಾಗಿದ್ದು, ಅಗತ್ಯ ವಸ್ತುಗಳ ಕಾಯ್ದೆ (Essential Commodities Act, 1955)ಯ ಕಲಂ 3(2)(a), 3(2)(c), 3(2)(d) ಹಾಗೂ 3(2)(f) ಅಡಿಯಲ್ಲಿ ತನಿಖೆ ಮುಂದುವರಿದಿದೆ.


























