ಬಂಟ್ವಾಳ: ತಾಲೂಕಿನ ಇಡ್ಕಿದು ಗ್ರಾಮದ ನಿವಾಸಿ ಕೆ. ಸೂರ್ಯನಾರಾಯಣ (79) ಅವರ ಮನೆಯಲ್ಲಿ ತಡರಾತ್ರಿ ನುಗ್ಗಿದ ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ, ₹2.60 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.
ಜುಲೈ 25ರಂದು ರಾತ್ರಿ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದ ವೇಳೆ ಇಬ್ಬರು ಅಪರಿಚಿತರು ಮನೆಯೊಳಗೆ ಪ್ರವೇಶಿಸಿರುವುದನ್ನು ಸೂರ್ಯನಾರಾಯಣ ಅವರು ಗಮನಿಸಿದ್ದಾರೆ. ಅವರು ಎದ್ದು ನೋಡುವಷ್ಟರಲ್ಲಿ ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಸೂರ್ಯನಾರಾಯಣ ಅವರ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 163/2026 ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 329(4), 115(2), 309(4) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.



























