ವಿಟ್ಲ: ಬಹರೈನ್‌ನಲ್ಲಿ ಉದ್ಯೋಗದಲ್ಲಿದ್ದ ಹಾಗೂ ವಾರದ ಹಿಂದಷ್ಟೇ ಸ್ವಗ್ರಾಮಕ್ಕೆ ಆಗಮಿಸಿದ್ದ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಬೆಂಗೋಡಿ ನಿವಾಸಿ ದಿವಾಕರ ಶೆಟ್ಟಿ (52) ಅವರು ಭಾನುವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಬೆಂಗೋಡಿ ಸೀತಾರಾಮ ಶೆಟ್ಟಿ ಹಾಗೂ ಪುಷ್ಪಾವತಿ ದಂಪತಿಯ ಪುತ್ರರಾಗಿದ್ದ ದಿವಾಕರ ಶೆಟ್ಟಿ ಅವರು ಬಹರೈನ್‌ನ ಖಾಸಗಿ ರೆಸ್ಟೋರೆಂಟ್‌ನಲ್ಲಿ ಉದ್ಯೋಗಿಯಾಗಿದ್ದರು. ಕ್ರಿಕೆಟ್ ಮೇಲಿನ ಅಪಾರ ಆಸಕ್ತಿಯಿಂದ ಉತ್ತಮ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು.
ಭಾನುವಾರ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ವಿಟ್ಲ ಚಂದಳಿಕೆಯ ಮೈದಾನದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಕ್ರಿಕೆಟ್ ಆಡಿದ್ದರು. ಆಟ ಮುಗಿಸಿ ಮನೆಗೆ ತೆರಳಲು ಸಿದ್ಧವಾಗುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣವೇ ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ ಪುತ್ತೂರಿನ ಆಸ್ಪತ್ರೆಗೆ ತಲುಪುವಷ್ಟರಲ್ಲಿ ದಿವಾಕರ ಶೆಟ್ಟಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಮೃತರು ಪತ್ನಿ, ಪುತ್ರ, ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



























