ಪುತ್ತೂರು: ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಕೆಗೆ ಇರುವ ನಿರ್ಬಂಧದ ಹಿನ್ನೆಲೆಯಲ್ಲಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿದ್ದ ಸ್ತಬ್ಧಚಿತ್ರಗಳ ಧ್ವನಿ ಬಳಕೆಗೆ ಪೊಲೀಸರು ನಿರ್ಬಂಧಿಸಿದ ಘಟನೆ ಗಾಂಧಿಕಟ್ಟೆ ಬಳಿ ನಡೆದಿದೆ.
ಶ್ರೀ ಗಣೇಶನ ವಿಗ್ರಹವನ್ನು ಹೊತ್ತ ಮೂಷಿಕರಥದ ಮುಂಭಾಗದಲ್ಲಿ 12ಕ್ಕೂ ಅಧಿಕ ಸ್ತಬ್ಧಚಿತ್ರಗಳು ವಿವಿಧ ಪರಿಕಲ್ಪನೆ ಹಾಗೂ ಕಲಾತ್ಮಕ ವಿನ್ಯಾಸಗಳೊಂದಿಗೆ ನಿಗದಿತ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತಾ ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದವು. ಧ್ವನಿ ಹಾಗೂ ಆಕರ್ಷಕ ವಿನ್ಯಾಸಗಳೊಂದಿಗೆ ನಡೆಯುತ್ತಿದ್ದ ಸ್ತಬ್ಧಚಿತ್ರಗಳ ಪ್ರದರ್ಶನ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.
ಶೋಭಾಯಾತ್ರೆ ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆ ಬಳಿ ತಲುಪುವ ವೇಳೆಗೆ ರಾತ್ರಿ 10 ಗಂಟೆಯಾಗಿದ್ದರಿಂದ ಪೊಲೀಸರು ಸ್ತಬ್ಧಚಿತ್ರಗಳಲ್ಲಿನ ಧ್ವನಿವರ್ಧಕ ಬಳಕೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು. ಪ್ರದರ್ಶನ ಆರಂಭಗೊಂಡ ಬಳಿಕ ಅದನ್ನು ಅರ್ಧದಲ್ಲೇ ನಿಲ್ಲಿಸುವುದು ಸೂಕ್ತವಲ್ಲ ಎಂದು ಸಂಘಟಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಪೊಲೀಸರು ಹಾಗೂ ಸಂಘಟಕರ ನಡುವೆ ಚರ್ಚೆ ನಡೆಯಿತು.
ನಂತರ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರು ಮಧ್ಯಪ್ರವೇಶಿಸಿ, ನಡೆಯುತ್ತಿದ್ದ ಒಂದು ಸ್ತಬ್ಧಚಿತ್ರದ ಪ್ರದರ್ಶನವನ್ನು ಪೂರ್ಣಗೊಳಿಸಲು ಅವಕಾಶ ನೀಡಿದರು. ಪ್ರದರ್ಶನ ಪೂರ್ಣಗೊಂಡ ಬಳಿಕ ಧ್ವನಿವರ್ಧಕ ಬಳಕೆಯನ್ನು ಸ್ಥಗಿತಗೊಳಿಸಲಾಯಿತು.
ಧ್ವನಿವರ್ಧಕವಿಲ್ಲದೆ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಸುವುದು ನೀರಸವಾಗಲಿದೆ ಎಂಬ ಕಾರಣಕ್ಕೆ ಬಸ್ ನಿಲ್ದಾಣದ ಬಳಿಯಿಂದ ಸ್ತಬ್ಧಚಿತ್ರಗಳ ಪ್ರದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಬಳಿಕ ಶ್ರೀ ಗಣೇಶನ ವಿಗ್ರಹವನ್ನು ಹೊತ್ತ ಮೂಷಿಕರಥದೊಂದಿಗೆ ಭಕ್ತರು ಶೋಭಾಯಾತ್ರೆಯಲ್ಲಿ ಮುಂದುವರಿದರು.
ಸ್ತಬ್ಧಚಿತ್ರಗಳ ಪ್ರದರ್ಶನವನ್ನು ವೀಕ್ಷಿಸಲು ಗಾಂಧಿಕಟ್ಟೆಯಿಂದ ದರ್ಬೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಪ್ರೇಕ್ಷಕರು ಕಾದು ಕುಳಿತಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನಡೆಯದೆ ಹಲವರು ನಿರಾಶೆಯಿಂದ ಹಿಂದಿರುಗುವಂತಾಯಿತು.


























