ಗದಗ: ಕಪಟಗಿರಿ ಫೌಂಡೇಶನ್ (ರಿ) ಕಳಸಾಪುರ-ಗದಗ ಇದರ ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ – 2026ರ ಅಂಗವಾಗಿ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ, ವಿಚಾರ ಸಂಕಿರಣ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 20ರಂದು ಗದಗದ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಮುಂಡರಗಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಮಕ್ಕಳ ಸಾಹಿತಿಗಳಾದ ಡಾ. ನಿಂಗು ಸೊಲಗಿ ಅವರು ವಹಿಸಲಿದ್ದಾರೆ.
ಈ ರಾಜ್ಯ ಮಟ್ಟದ ಸಮಾರಂಭದಲ್ಲಿ ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನ ಶಿಕ್ಷಕಿ ಹೇಮಲತಾ ಗೋಕುಲ್‌ನಾಥ್ ಅವರಿಗೆ `ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಜೊತೆಗೆ, ಸಮಾರಂಭದ ಪ್ರಮುಖ ಆಕರ್ಷಣೆಯಾದ ರೇಖಾಚಿತ್ರ ಪ್ರದರ್ಶನವನ್ನು ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕರಾದ ಗೋಕುಲ್‌ನಾಥ್ ಪಿ. ವಿ. ಅವರು ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಜಾನಪದ, ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರಮುಖ ವಿಚಾರ ಗೋಷ್ಠಿಗಳು ನಡೆಯಲಿವೆ.ಜಾನಪದ, ಸಮಕಾಲೀನ ಸಮಾಜ ಮತ್ತು ಪ್ರದರ್ಶನ ಕಲೆಗಳು, ಕನ್ನಡ ಸಾಹಿತ್ಯ, ಜಾನಪದ ಹಾಗೂ ಸ್ಥಳನಾಮಗಳ ಅಂತರ ಸಂಬಂಧ, ಜಲ ಜಾನಪದ ಹಾಗೂ ಜಾನಪದ ಆಚರಣೆಗಳ ವೈಜ್ಞಾನಿಕ ವಿಶ್ಲೇಷಣೆ, ವಚನ ಸಾಹಿತ್ಯ ಮತ್ತು ತತ್ತ್ವಪದಕಾರರ ಭಾವಸಂವೇದನೆಯ ಅನುಸಂಧಾನಕ್ಕೆ ಸಂಬಂಧ ಪಟ್ಟಂತೆ ವಿಚಾರ ಗೋಷ್ಠಿಗಳು ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವರಾದ ಶಹಾಜಾನ್ ಮುದಕವಿ ಅವರು ಸಮಾರೋಪ ಭಾಷಣ ಮಾಡಲಿದ್ದು, ಕಪಟಗಿರಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಇಟಗಿಮಠ, ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಣಾಸಕ್ತರು, ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.




























