ಉಪ್ಪಿನಂಗಡಿ: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮಗ ಹಾಗೂ ಗಂಡನ ತಂಗಿಯ ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ನೆಯಲ್ಲಿ ಸೆ.19ರಂದು ಮಧ್ಯಾಹ್ನ ನಡೆದಿದೆ.
ಪೆರ್ನೆ ನಿವಾಸಿ ಸಿನಾನ್ (32) ಹಾಗೂ ನೂರುನ್ನಿಸಾ (28) ದಂಪತಿ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ವಿಚಾರವಾಗಿ ಕಲಹ ನಡೆದಿದ್ದು, ಈ ವೇಳೆ ಕೋಪಗೊಂಡ ನೂರುನ್ನಿಸಾ ಮನೆಯಲ್ಲಿದ್ದ ತನ್ನ ಸುಮಾರು ಮೂರುವರೆ ವರ್ಷದ ಮಗುವನ್ನು ಹಾಗೂ ಗಂಡನ ತಂಗಿಯ ಸುಮಾರು ಮೂರು ವರ್ಷದ ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಘಟನೆ ಗಮನಕ್ಕೆ ಬಂದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಎರಡೂ ಮಕ್ಕಳನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಈ ಪೈಕಿ ನೂರುನ್ನಿಸಾ ಅವರ ಗಂಡನ ತಂಗಿಯ ಸುಮಾರು ಮೂರು ವರ್ಷದ ಮಗು ಮೃತಪಟ್ಟಿದ್ದು, ನೂರುನ್ನಿಸಾ ಅವರ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 121/2026ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿತೆ ನೂರುನ್ನಿಸಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



























