ಬಜಪೆ – ಕಟೀಲು ರಾಜ್ಯ ಹೆದ್ದಾರಿ 67 ರ ಎಕ್ಕಾರಿನ ಬೊಲೋಡಿ ಬಳಿ ಸೋಮವಾರ ಮಧ್ಯಾಹ್ನ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಕುಳಿತಿದ್ದ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಬೈಕ್ ಸವಾರನನ್ನು ಮಹಮ್ಮದ್ ಬಶೀರ್ (45) ಎಂದು ಗುರುತಿಸಲಾಗಿದೆ. ಮೂಲತಃ ಕಿನ್ನಿಗೋಳಿ ಕಾಪಿಕಾಡಿನ ನಿವಾಸಿಯಾಗಿದ್ದ ಇವರು ಪ್ರಸ್ತುತ ಬಜಪೆ ಪಟ್ಟಣದ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು.
ಕಟೀಲು ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್ ಹಾಗೂ ಬಜಪೆ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಎಕ್ಕಾರು ಬೋಲೋಡಿ ಬಳಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಮಹಮ್ಮದ್ ಬಶೀರ್ ಅವರ ತಲೆಗೆ ತೀವ್ರ ಗಾಯಗಳಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ಪತ್ನಿಯನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.


























