ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಅವರದ್ದು ಆತ್ಮಹತ್ಯೆ ಅಲ್ಲ, ಅದು ಸರ್ಕಾರವೇ ಮಾಡಿರುವ ಕೊಲೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.
ಚಾಮರಾಜಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ. ಈ ಭ್ರಷ್ಟಾಚಾರ ಖಂಡಿಸಿ ನಾವು ಒಂದು ತಿಂಗಳು ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದರು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಬಿಜೆಪಿ ಸರ್ಕಾರವು ರೌಡಿಸಂ ಮಾಡುತ್ತಿದೆ. ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ ಸರ್ಕಾರ ತೊಂದರೆ ಕೊಡಬಹುದು ಎನ್ನುವ ಕಾರಣಕ್ಕೆ ಅವನ್ನು ಒದಗಿಸುತ್ತಿಲ್ಲ. ಪ್ರತಿ ಟೆಂಡರ್‌ಗೂ ಕನಿಷ್ಠ ಶೇ 5ರ ಕಮಿಷನ್ ಕೊಡಬೇಕಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆರೋಗ್ಯ, ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರನ್ನು ಕಾಡುತ್ತಿರುವ ಭ್ರಷ್ಟಾಚಾರ ಸಮಸ್ಯೆಗಳನ್ನು ಪರಿಹರಿಸದಿದ್ದರೆ 15 ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನಾವು ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ನಮ್ಮ ಮಾತು ಸಂಪೂರ್ಣ ಸತ್ಯ. ಆರೋಗ್ಯ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಅತ್ಯಂತ ಭ್ರಷ್ಟ ಮಂತ್ರಿ. ಅವರು ಪ್ರತಿ ಕಾಮಗಾರಿಗಳಲ್ಲಿಯೂ ಶೇ 5ರ ಕಮಿಷನ್ ಪಡೆಯುತ್ತಿದ್ದಾರೆ ಎಂದರು.
ಗುತ್ತಿಗೆಯನ್ನು ಇಂಥವರಿಗೇ ನೀಡಬೇಕೆಂದು ಸಚಿವರು ಮೊದಲೇ ನಿರ್ಧರಿಸುತ್ತಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಕೋಟಿ ವೆಚ್ಚದ ಕಾಮಗಾರಿ ನಡೆದಿದೆ. ಅಷ್ಟು ದೊಡ್ಡಮೊತ್ತದ ಹಣ ವೆಚ್ಚ ಮಾಡಿದರೂ ಕಾಮಗಾರಿ ಕಳಪೆಯಾಗಿದೆ ಎಂದು ಉದಾಹರಣೆ ನೀಡಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಕಡಿವಾಣ ಹಾಕಿ ಎಂದು ಮುಖ್ಯಮಂತ್ರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮೇ 25ರಿಂದ ಒಂದು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಳಿಸುತ್ತೇವೆ. ಮುಖ್ಯಮಂತ್ರಿಗಳು ಮೌನಿಯಾಗಿದ್ದಾರೆ. ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಟೆಂಡರ್ ಪಡೆಯಲು 5 ಪರ್ಸೆಂಟ್ ಕೊಡಬೇಕಾಗುತ್ತದೆ. ಆರೋಗ್ಯ ಇಲಾಖೆ ಸಚಿವರೇ ಪರ್ಸೆಂಟೇಜ್ ಪಡೆಯುತ್ತಾರೆ. ಇಂದು ದಾಖಲೆಗಳನ್ನು ಬಿಡುಗಡೆ ಮಾಡುವ ಉದ್ದೇಶವಿತ್ತು. ಆದರೆ ಜೀವ ಬೆದರಿಕೆ ಬರುವ ಸಾಧ್ಯತೆಯಿದ್ದ ಕಾರಣ ದಾಖಲೆ ಬಿಡುಗಡೆ ಮಾಡಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಬಿಬಿಎಂಪಿ ಮತ್ತು ನೀರಾವರಿ ಇಲಾಖೆಗಳಲ್ಲಿ ಸಚಿವರೇ ಏಜೆಂಟ್ಗಳನ್ನು ಗುರುತಿಸಿದ್ದಾರೆ. ಮುಖ್ಯಮಂತ್ರಿ ಕಚೇರಿಯೂ ಇದಕ್ಕೆ ಹೊರತಾಗಿಲ್ಲ. ಪರ್ಸೇಂಟೇಜ್ ನೀಡಿರುವ ಬಗ್ಗೆ ಆಡಿಯೊ ಸೇರಿದಂತೆ ಹಲವು ದಾಖಲೆಗಳಿವೆ ಎಂದು ವಿವರಿಸಿದರು. ಆರೋಗ್ಯ ಸಚಿವ ಸುಧಾಕರ್ ಅವರ ಕುಟುಂಬದ ಸದಸ್ಯರೇ ಶೇ 60ರಷ್ಟು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಸಚಿವರ ಪತ್ನಿಯೇ ಕಾಮಗಾರಿಗಳಿಗೆ ಚೆಕ್ ನೀಡುತ್ತಾರೆ. ಚಿತ್ರದುರ್ಗ ಜಿಲ್ಲೆಯ ಶಾಸಕರೊಬ್ಬರ ಮಗ ಡಾಕ್ಟರ್ ಹುದ್ದೆ ಬಿಟ್ಟು ಗುತ್ತಿಗೆದಾರರಾಗಿದ್ದಾರೆ ಎಂದು ದೂರಿದರು. ನಮ್ಮ ಆರೋಪಗಳ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಸೂಕ್ತ ದಾಖಲೆ ಒದಗಿಸುತ್ತೇವೆ. ನಾವು ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಸುಧಾಕರ್ ಸಚಿವ ಸ್ಥಾನ ಕಳೆದುಕೊಳ್ಳುತ್ತಾರೆ ಎಂದರು.
ಸಂಘದ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಸಚಿವರು ಮತ್ತು ಶಾಸಕರು ನಮ್ಮನ್ನು ಬೆದರಿಸುವುದನ್ನು ಬಿಡಬೇಕು. ರಾಜ್ಯದಲ್ಲಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗುತ್ತಿದೆ. ಇದಕ್ಕೆ ಪರ್ಸೆಂಟೇಜ್ ಹಾವಳಿಯೇ ಕಾರಣ ಎಂದರು.