ಶಿವಮೊಗ್ಗ: ಬಿಜೆಪಿ ಕಚೇರಿ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಈಶ್ವರಪ್ಪ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.
ಈಶ್ವರಪ್ಪ ಅವರು ಸುದ್ದಿಗೋಷ್ಟಿ ನಡೆಸಿ ಹೊರಬರುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಈಶ್ವರಪ್ಪ ಪರ ಘೋಷಣೆ ಕೂಗಿದ್ದು, ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಕಚೇರಿ ಬಳಿ ಕಾಂಗ್ರೆಸ್ಸಿಗರನ್ನು ಬಿಟ್ಟಿದ್ದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಕಚೇರಿ ಬಳಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದಾರೆ.
ಶಿವಮೊಗ್ಗ ಬಿಜೆಪಿ ಕಚೇರಿ ಬಳಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.