ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪು ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಸರಕಾರಿ ಮೆಡಿಕಲ್ ಕಾಲೇಜು ಹಾಗೂ 300 ಹಾಸಿಗೆಗಳ ಆಸ್ಪತ್ರೆ ಯೋಜನೆಗೆ ರಾಜ್ಯ ಸರಕಾರ ಈಗಾಗಲೇ ಅನುಮತಿ ನೀಡಿದ್ದು, ಇದೀಗ ಯೋಜನೆಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತಿವೆ. ಇದರ ಅಂಗವಾಗಿ ಉದ್ದೇಶಿತ ಮೆಡಿಕಲ್ ಕಾಲೇಜು ಹಾಗೂ ಮೆಡಿಕಲ್ ಆಸ್ಪತ್ರೆ ಸಂಪರ್ಕ ರಸ್ತೆ ಕಾಮಗಾರಿಗೆ ಮೇ 24 ರಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ಪುತ್ತೂರಿನ ಜನತೆ ಬಹುಕಾಲದಿಂದ ನಿರೀಕ್ಷಿಸಿದ್ದ ಮಹತ್ವಾಕಾಂಕ್ಷಿ ಯೋಜನೆ ಇದೀಗ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ಹಾಗೂ 300 ಬೆಡ್‌ನ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗಲಿದ್ದು, ಇದರ ಮೂಲಕ ಪುತ್ತೂರು ಸೇರಿದಂತೆ ಸಂಪೂರ್ಣ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಉತ್ತಮ ವೈದ್ಯಕೀಯ ಸೇವೆ ಲಭ್ಯವಾಗಲಿದೆ” ಎಂದು ಹೇಳಿದರು.
“ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸುಮಾರು 15 ರಿಂದ 20 ದಿನಗಳ ಒಳಗಾಗಿ ಆಗಮಿಸಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದೇ ವೇಳೆ ಕೊಯಿಲ ಪಶು ವೈದ್ಯಕೀಯ ಕಾಲೇಜು ಉದ್ಘಾಟನೆಯು ನಡೆಯಲಿದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ಪೂರ್ವಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ” ಎಂದು ಮಾಹಿತಿ ನೀಡಿದರು.
ಮೆಡಿಕಲ್ ಕಾಲೇಜು ನಿರ್ಮಾಣದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶ ಸಿಗಲಿದ್ದು, ಆರೋಗ್ಯ ಸೇವೆಯಲ್ಲಿಯೂ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯಪಟ್ಟರು.
ಸಂಪರ್ಕ ರಸ್ತೆ ಅಭಿವೃದ್ಧಿಯಿಂದ ಮೆಡಿಕಲ್ ಕಾಲೇಜು ಪ್ರದೇಶಕ್ಕೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಕುಡಿಯುವ ನೀರು, ವಿದ್ಯುತ್, ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.



























