ಪುತ್ತೂರು, ಜು. 10: 2017ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು, ಆತನ ವಿರುದ್ಧ 41 ಬಾರಿ ದಸ್ತಗಿರಿ ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2017ರ ಡಿಸೆಂಬರ್ 22ರಂದು ಪುತ್ತೂರು ನಗರ ವ್ಯಾಪ್ತಿಯ ಮನೆಯೊಂದಕ್ಕೆ ಮೂವರು ಅಪರಿಚಿತರು ನುಗ್ಗಿ, ಮನೆಯಲ್ಲಿದ್ದವರಿಗೆ ಪಿಸ್ತೂಲ್ ಹಾಗೂ ಚೂರಿ ತೋರಿಸಿ ಸುಮಾರು ₹2.88 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ₹60 ಸಾವಿರ ನಗದು ದರೋಡೆ ಮಾಡಿದ್ದರು. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 200/2017 ದಾಖಲಾಗಿ ತನಿಖೆ ನಡೆಯುತ್ತಿತ್ತು.
ಪ್ರಕರಣದ ಆರೋಪಿಯಾದ ಕೇರಳ ರಾಜ್ಯದ ತ್ರಿಶೂರ್ ನಿವಾಸಿ ನೆಲ್ಸನ್ ಸಿ.ವಿ. (38) 2021ರ ಆಗಸ್ಟ್ 27ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ಒಟ್ಟು 41 ಬಾರಿ ದಸ್ತಗಿರಿ ವಾರಂಟ್ ಜಾರಿಗೊಳಿಸಿತ್ತು.
ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ಎ., ಪೊಲೀಸ್ ಕಾನ್ಸ್ಟೇಬಲ್ ವಿನಾಯಕ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಶಿವರಾಜ್ ಅವರ ತಂಡವು ಜುಲೈ 8ರಂದು ತ್ರಿಶೂರ್ ಜಿಲ್ಲೆಯ ಮಿಯೂರು ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಆರೋಪಿ ಈ ಹಿಂದೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಜಾಮೀನಿನ ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿದ್ದರಿಂದ, ಆತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 80/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 269ರ ಅನ್ವಯ ಮತ್ತೊಂದು ಪ್ರಕರಣವೂ ದಾಖಲಾಗಿದೆ.
























