ವಿಟ್ಲ: ಕನ್ಯಾನ ಗ್ರಾಮದ ಕಣಿಯೂರಿನ ಬಾಡಿಗೆ ಮನೆಯೊಂದರಲ್ಲಿ ಮೃತಪಟ್ಟ ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿಯ ಮನೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭೇಟಿ ನೀಡಿ, ಮೃತ ವಿದ್ಯಾರ್ಥಿನಿಯ ಫೋಷಕರಿಂದ ಮಾಹಿತಿ ಪಡೆದುಕೊಂಡು ಅವರಿಗೆ ಧೈರ್ಯ ತುಂಬಿದರು.

ಈ ಸಂದರ್ಭ ಮಾತನಾಡಿದ ಅವರು, ಬಡಕುಟುಂಬವನ್ನು ದುರುಪಯೋಗ ಮಾಡಬಾರದು. ತಾಳ್ಮೆ ಸಹನೆ ದೌರ್ಬಲ್ಯವಲ್ಲ ಅದೊಂದು ಶಕ್ತಿ. ಸನಾತನ ಹಿಂದೂ ಧರ್ಮ ಎಚ್ಚರವಾಗಬೇಕು, ಜಾಗೃತರಾಗಬೇಕು. ಯಾವುದೇ ವರ್ಗಕ್ಕೆ ಈ ರೀತಿಯ ಪರಿಸ್ಥಿತಿ ಆಗಬಾರದು. ಇದೊಂದು ಪೈಶಾಚಿಕ ದುಷ್ಕೃತ್ಯವಾಗಿದೆ. ಇದನ್ನು ನಾವು ಖಂಡಿಸಬೇಕಾಗಿದೆ. ಇದರಲ್ಲಿ ಹಿಂದೆ ಮುಂದೆ ನೋಡುವ ವಿಚಾರವಿಲ್ಲ. ಎಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಇದೇ ಆರಂಭ ಇದೇ ಕೊನೆಯಾಗಬೇಕು. ನಾವೆಲ್ಲರೂ ಸಂಘಟಿತರಾಗಿ ಎಚ್ಚರದಿಂದಿರಬೇಕು ಎಂದರು.
ಈ ಒಂದು ಸಾವು ಬೇರೆಯೇ ರೀತಿಯಲ್ಲಿ ನಡೆದಿರುವುದಾಗಿ ಕಂಡುಬರುತ್ತಿದೆ. ವಶೀಕರಣ ಬಳಕೆ ಮಾಡಿರುವ ಹಾಗೂ ಹೆದರಿಸಿ ಮಾಡಿರುವ ಘಟನೆಯೆಂದು ನಮಗೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಒಂದು ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಾಕ್ಷಿ ಕಂಡು ಬರುತ್ತಿಲ್ಲ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆಯಾಗಬೇಕು. ಸನಾತನ ಹಿಂದೂ ಧರ್ಮ ಇಂತಹ ವಿಚಾರ ಬಂದಾಗ ಒಗ್ಗಟ್ಟಾಗಬೇಕು ಜಾಗೃತಿಯಾಗಬೇಕು. ಇಂತಹ ದುಷ್ಕೃತ್ಯ ಸಮಾಜದಲ್ಲಿ ನಡೆಯಬಾರದು ಎಂದರು.

ಈ ವೇಳೆ ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ರಘುರಾಮ ಶೆಟ್ಟಿ ಕನ್ಯಾನ, ಒಡಿಯೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪಣೆಯಡ್ಕ, ವಿಶ್ವಹಿಂದೂ ಪರಿಷತ್ ನ ಕನ್ಯಾನ ಘಟಕದ ಅಧ್ಯಕ್ಷ ಲೊಕೇಶ್ ಗೌಡ ಕನ್ಯಾನ, ಭಜರಂಗದಳ ಸಂಚಾಲಕ ಕೃಷ್ಣಪ್ಪ ಗೌಡ ಪಣೆಯಡ್ಕ, ಭಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ, ವಿಶ್ವಹಿಂದೂ ಪರಿಷತ್ ನ ಕನ್ಯಾನ ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಬನಾರಿ, ಜಗದೀಶ್ ಸಿ.ಹೆಚ್, ದಿನೇಶ್ ಪಟ್ಲ ಉಪಸ್ಥಿತರಿದ್ದರು.