ನವದೆಹಲಿ: ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶವನ್ನ ನೀಡಿದ್ದು, ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಎ.ಜಿ.ಪೆರಾರಿವಾಲನ್ನನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಈ ಮೂಲಕ 31 ವರ್ಷಗಳ ಬಳಿಕ ಪೆರಾರಿವಾಲನ್ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾನೆ.
ಆರ್ಟಿಕಲ್ 142ರ ಅಡಿಯಲ್ಲಿ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ ಸುಪ್ರೀಂಕೋರ್ಟ್ ಮಹತ್ವದ ಹೆಜ್ಜೆಯನ್ನ ಇಟ್ಟಿದೆ. ಪೆರಾರಿವಾಲನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ನಾನು 31 ವರ್ಷಗಳಿಂದ ಜೈಲಿನಲ್ಲಿದ್ದೇನೆ, ಬಿಡುಗಡೆ ಮಾಡಬೇಕು ಎಂದು ಕೋರ್ಟ್ಗೆ ಮನವಿ ಸಲ್ಲಿಸಿದ್ದ. ಮೇ 10 ರಂದು ವಿಚಾರಣೆಯನ್ನ ಅಂತ್ಯಗೊಳಿಸಿದ್ದ ಕೋರ್ಟ್, ತೀರ್ಪನ್ನ ಇಂದಿಗೆ ಕಾಯ್ದಿರಿಸಿತ್ತು. 2008ರಲ್ಲಿ, ತಮಿಳುನಾಡು ಕ್ಯಾಬಿನೆಟ್ ಆತನನ್ನ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ರಾಜ್ಯಪಾಲರು ಈ ವಿಚಾರವನ್ನ ರಾಷ್ಟ್ರಪತಿಗಳ ಅಂಗಳಕ್ಕೆ ಕಳುಹಿಸಿದ್ದರು.
ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಪದೇ ಪದೇ ಪ್ರಶ್ನೆಗಳನ್ನು ಎತ್ತಿತ್ತು. ರಾಜ್ಯಪಾಲರು ಸಂಪುಟದ ಅನುಮೋದನೆಯ ವಿರುದ್ಧವಾಗಿ ಹೋಗಬಹುದೇ ಎಂಬುದು ಕಾನೂನು ಮತ್ತು ಸಾಂವಿಧಾನಿಕ ಪ್ರಶ್ನೆಯಾಗಿದೆ ಎಂದು ಕೋರ್ಟ್ ಹೇಳಿತ್ತು. ಅಲ್ಲದೇ ಇದೊಂದು ಗಂಭೀರ ವಿಚಾರ. ಫೆಡರಲ್ ವ್ಯವಸ್ಥೆ ಮೇಲೆ ಪರಿಣಾಮವನ್ನು ಬೀರಬಹುದು. ಇದರಿಂದ ಒಕ್ಕೂಟ ವ್ಯವಸ್ಥೆ ನಾಶವಾಗಬಹುದು. ಯಾರೂ ಕಾನೂನಿಗಿಂತ ಮೇಲಲ್ಲ. ಸರ್ಕಾರ ನಮ್ಮ ಆದೇಶವನ್ನು ಪಾಲಿಸಬೇಕು, ಇಲ್ಲದಿದ್ದರೆ ನ್ಯಾಯಾಲಯವು ಆದೇಶವನ್ನು ನೀಡುತ್ತದೆ. ಏಕೆಂದರೆ ಸರ್ಕಾರ ಕಾನೂನು ಪಾಲಿಸದಿದ್ದರೆ ನ್ಯಾಯಾಲಯ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಹೇಳಿತ್ತು.
ವಕೀಲರ ವಾದ ಏನಾಗಿತ್ತು..?
ಎಜಿ ಪೆರಾರಿವಾಲನ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಮತ್ತು ಜೀವಾವಧಿ ಶಿಕ್ಷೆಯನ್ನ ಅನುಭವಿಸುತ್ತಿದ್ದಾನೆ. ಪೆರಾರಿವಾಲನ್ ಬರೋಬ್ಬರಿ 36 ವರ್ಷ ಜೈಲಿನಲ್ಲಿ ಕಳೆದಿದ್ದು, ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ವಕೀಲರು ವಾದಿಸಿದ್ದರು. ಸೆಪ್ಟೆಂಬರ್ 2018ರಲ್ಲಿ ತಮಿಳುನಾಡಿನ ಎಐಎಡಿಎಂಕೆ ಕ್ಯಾಬಿನೆಟ್ ಪೆರಾರಿವಾಲನ್ ಬಿಡುಗಡೆಗೆ ನಿರ್ಣಯವನ್ನು ಅಂಗೀಕರಿಸಿತು. ಅದರ ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು.