ವಿಟ್ಲ: ರಾತ್ರೋ ರಾತ್ರಿ ಕಾಸರಗೋಡು ಜಿಲ್ಲೆಯ ಕೆಲವೆಡೆ ಅಪರಾಧ ಕೃತ್ಯಗಳನ್ನು ನಡೆಸಿ ಪರಾರಿಯಾಗುತ್ತಿದ್ದ ಕೇರಳ ರಾಜ್ಯದ ಕಾಸರಗೋಡು, ಪೈವಳಿಕೆ ಮತ್ತು ಮಿಯಪದವು ಪ್ರದೇಶಗಳಲ್ಲಿ ತಮ್ಮನ್ನು ಡಿ ಗ್ಯಾಂಗ್ ನವರು ಎಂಬುದಾಗಿ ಕರೆಸಿಕೊಳ್ಳುತ್ತಿದ್ದ ಯುವಕರ ನಟೋರಿಯಸ್ ಗ್ಯಾಂಗ್ ಒಂದನ್ನು ವಿಟ್ಲ ಠಾಣಾ ಎಸ್. ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಕೇರಳ ಕರ್ನಾಟಕ ಗಡಿ ಪ್ರದೇಶವಾಗಿರುವ ಸಾಲೆತ್ತೂರು ಸಮೀಪದ ಕೊಡಂಗೆ ಎಂಬಲ್ಲಿ ವಶಕ್ಕೆ ಪಡೆದುಕೊಂಡ ಘಟನೆ ಮಾ.೨೬ರ ಮುಂಜಾನೆ ವೇಳೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕುಂಬಳೆ ಸಮೀಪದ ಅಡ್ಕ ನಿವಾಸಿ ಅಶ್ಬಾಕ್, ಮೀಯಪದವು ನಿವಾಸಿ ಗಳಾದ ಮೊಹಮ್ಮದ್ ಶಾಕೀರ್, ಅಬ್ದುಲ್ ಲತೀಫ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದು ಕಾರು, 1 ಪಿಸ್ತೂಲ್, 13 ಸಜೀವ ಗುಂಡುಗಳು, 1 ಡ್ರಾಗರ್ ವಶಪಡಿಸಲಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.೨೫ರ ತಡರಾತ್ರಿ ವೇಳೆ ವಿಟ್ಲ ಠಾಣಾ ಎಸ್. ಐ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅವರ ನೇತೃತ್ವದ ಪೊಲೀಸರ ತಂಡ ವಿಟ್ಲ ಠಾಣಾ ವ್ಯಾಪ್ತಿಯ ಗಡಿಪ್ರದೇಶವಾದ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ರಾತ್ರಿಯಿಂದಲೇ ವಾಹನ ತಪಾಸಣೆ ನಡೆಸುತ್ತಿತ್ತು.
ಈ ವೇಳೆ ಕೂಡುರಸ್ತೆ ಭಾಗದಿಂದ ಸಾಲೆತ್ತೂರು ಕಡೆಗೆ ಬಂದ ಕೇರಳ ನೋಂದವಣೆಯ ಐ೨೦ ಕಾರೊಂದು ಬಂದಿದ್ದು, ಕಾರನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಕಾರಿನ ಚಾಲಕ ಪೊಲೀಸರ ಕಡೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದಾಗ ಕಾರು ರಸ್ತೆಗಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಚರಂಡಿಗೆ ಇಳಿದು ನಿಂತಿದೆ. ಈ ವೇಳೆ ಕಾರಿನಲ್ಲಿದ್ದ ಐವರು ಪರಾರಿಯಾಗಲು ಯತ್ನಿಸಿದಾಗ ಬೆನ್ನಟ್ಟಿದ ಪೊಲೀಸರ ತಂಡ ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳು ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಾದ ಮೂವರ ಮೇಲೆ ಕಾಸರಗೋಡು, ಕುಂಬಳೆ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಗಾಂಜಾ, ಕಿಡ್ನಾಪ್ ಪ್ರಕರಣಗಳು ದಾಖಲಾಗಿದೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೆ, ಎಸ್ಪಿ ಲಕ್ಷ್ಮಿಪ್ರಸಾದ್, ಡಿವೈಎಸ್ಪಿ ವೆಲೈಂಟೈನ್ ಡಿ ಸೋಜ, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ಮೊದಲಾದವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.